ಉಡುಪಿ: ಹಿರಿಯ ಸಿವಿಲ್‌ ನ್ಯಾಯಾಧೀಶ ವಿವೇಕಾನಂದ ಎಸ್‌.ಪಂಡಿತ್ ರಿಗೆ ಬೀಳ್ಕೊಡುಗೆ

ಉಡುಪಿ: ಒಡೆದ ಮನಸ್ಸುಗಳನ್ನು ಒಂದಾಗಿಸುವ ಸಾಮರ್ಥ್ಯವಿರುವ ನ್ಯಾಯಾಧೀಶರು ಕೌಟುಂಬಿಕ ನ್ಯಾಯಾಲಯಗಳಿಗೆ ಅಗತ್ಯ. ಮದುವೆ ಎಂಬ ಸಾಮಾಜಿಕ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಜವಾಬ್ದಾರಿ ನ್ಯಾಯಾಧೀಶರ ಮೇಲಿದೆ’ ಎಂದು ಹಿರಿಯ ನ್ಯಾಯಾಧೀಶರಾದ ವಿವೇಕಾನಂದ ಎಸ್‌.ಪಂಡಿತ್ ಅಭಿಪ್ರಾಯಪಟ್ಟರು.

ಬಾರ್ ಅಸೋಸಿಯೇಷನ್‌ ಸಭಾಂಗಭಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಕೃತಿಯ ಸುಂದರ ಸೃಷ್ಟಿಯಲ್ಲಿ ವಿವಾಹವೂ ಒಂದು. ಮದುವೆ ಎಂಬ ಬಂಧ ದೀರ್ಘಕಾಲ ಉಳಿಯಬೇಕು. ಈ ನಿಟ್ಟಿನಲ್ಲಿ ಕೌಟುಂಬಿಕ ನ್ಯಾಯಾಲಯಗಳ ನ್ಯಾಯಾಧೀಶರ ಮೇಲಿನ ಜವಾಬ್ದಾರಿ ಹೆಚ್ಚು ಎಂದರು.

ಕೌಟುಂಬಿಕ ನ್ಯಾಯಾಲಯಗಳ ರಚನೆಯೇ ಕುಟುಂಬಗಳನ್ನು ಒಗ್ಗೂಡಿಸುವುದು. ಆದರೆ, ಎಲ್ಲ ಪ್ರಕರಣ ಗಳಲ್ಲಿ ಈ ಮಾತು ಅನ್ವಯಿಸುವುದಿಲ್ಲ. ವಿಚ್ಛೇದನಕ್ಕೆ ಅರ್ಹವಿರುವಂತಹ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಬೇಕು. ಸಣ್ಣ ಪ್ರಾಯದಲ್ಲಿ ತಪ್ಪು ಹೆಜ್ಜೆಗಳನ್ನಿಟ್ಟು ವಿಚ್ಛೇದನದ ಮೂಲಕ ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಿರುವವರಿಗೆ ಶೀಘ್ರ ನ್ಯಾಯ ಸಿಗಬೇಕು. ನ್ಯಾಯದಾನ ಪ್ರಕ್ರಿಯೆಯಲ್ಲಿ ವಿಳಂಬವಾಗಬಾರದು ಎಂದರು.

ನ್ಯಾಯಾಲಯ ಎಂಬ ದೇಗುಲಕ್ಕೆ ವಕೀಲರು ಆಧಾರಸ್ಥಂಭಗಳಿದ್ದಂತೆ. ನ್ಯಾಯಾಧೀಶರು ಹಾಗೂ ವಕೀಲರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು. ಉಡುಪಿಯಲ್ಲಿ ಸಿಕ್ಕ ವೃತ್ತಿ ಅನುಭವ ಭವಿಷ್ಯದ ಬೆಳವಣಿಗೆಗೆ ಪೂರಕವಾಗಲಿದೆ. ಚಿಕ್ಕಬಳ್ಳಾಪುರದ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ಬಡ್ತಿ ಸಿಕ್ಕಿದ್ದು ಸಂತಸವಾಗಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಜೆ.ಎನ್‌. ಸುಬ್ರಹ್ಮಣ್ಯ ಮಾತನಾಡಿ, ‘ಕುಟುಂಬವನ್ನು ಸೇರಿಸುವ ಅಥವಾ ಒಡೆಯುವ ವಿಚಾರದಲ್ಲಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಬಹಳ ಸಹನೆ ಇರಬೇಕು’ ಎಂದು ಸಲಹೆ ನೀಡಿದರು.

ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಲೋಕ ಅದಾಲತ್ ಮೂಲಕ ಅತಿ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗುತ್ತಿವೆ. ಇದಕ್ಕೆಲ್ಲ ವಕೀಲರ ಸಹಕಾರ ಹಾಗೂ ಶ್ರಮ ಮುಖ್ಯ ಕಾರಣ ಎಂದರು. ಹಿರಿಯ ವಕೀಲರಾದ ಕೆ.ಆರ್.ರಾಮಚಂದ್ರ ಅಡಿಗ, ಎ.ಸಂಕಪ್ಪ ಹಾಗೂ ಆನಂದ್ ಮಡಿವಾಳ ನ್ಯಾಯಾಧೀಶರಾದ ವಿವೇಕಾನಂದ ಎಲ್‌.ಪಂಡಿತ್ ಕುರಿತು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್‌ ಪ್ರವೀಣ್ ಕುಮಾರ್ ವಂದಿಸಿದರು.

 

Leave a Reply

Your email address will not be published. Required fields are marked *

error: Content is protected !!