ನಾಳೆಯಿಂದ ನೈಟ್ ಕರ್ಫ್ಯೂ: ಪರಿಷ್ಕೃತ ಮಾರ್ಗ ಸೂಚಿ ಬಿಡುಗಡೆ!

ಬೆಂಗಳೂರು: ರಾತ್ರಿ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಯಾವುದೇ ವೈಯಕ್ತಿಕ ಸಂಚಾರ ಮಾಡಬಾರದು. ಜನರು ಓಡಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಸರಕು ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ.

ಹೊಸ ವರ್ಷ ಮತ್ತು ಕ್ರಿಸ್ ಮಸ್ ಆಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಸಂಚಾರ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಎಲ್ಲ ಕೈಗಾರಿಕೆಗಳು, ಕಂಪನಿಗಳು, ಸಂಘಟನೆಗಳು ತಮ್ಮ ಸಿಬ್ಬಂದಿ ಸಾಮರ್ಥ್ಯದಲ್ಲಿ ಶೇಕಡ 50ಕ್ಕೆ ಕಡಿತಗೊಳಿಸಿ, ಉಳಿದವರಿಗೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಸಂಸ್ಥೆಯ ಅಗತ್ಯ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಅಗತ್ಯವಿರುವ ಕೈಗಾರಿಕೆಗಳು ದಿನದ 24 ಗಂಟೆಯೂ ಯಾವುದೇ ನಿರ್ಬಂಧ ಇಲ್ಲದೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ; ದೂರದ ಪ್ರಯಾಣದ ಬಸ್ ಗಳು, ರೈಲುಗಳು ಮತ್ತು ವಿಮಾನ ಸೇವೆ ಅಬಾಧಿತವಾಗಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಸ್, ರೈಲು, ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ಮತ್ತು ಕರೆತರಲು ಟ್ಯಾಕ್ಸಿಗಳು, ಆಟೋಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಗುರುವಾರ ಮಧ್ಯರಾತ್ರಿ ಕ್ರಿಸ್ ಮಸ್ ಆಚರಣೆ ಇರುವುದರಿಂದ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ.

ಹೊಸ ವರ್ಷ ಮತ್ತು ಕ್ರಿಸ್ ಮಸ್ ಆಚರಣೆಯನ್ನು ಅಗತ್ಯ ಮಾರ್ಗಸೂಚಿಗಳೊಂದಿಗೆ ಪಾಲಿಸುವಂತೆಯೂ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಹೊರಡಿಸಿರುವ ಆದೇಶದ ಪ್ರತಿಯಲ್ಲಿ ತಿಳಿಸಿದ್ದಾರೆ.

ಈ ನಡುವೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಸಮಯವನ್ನು ಸರ್ಕಾರ ಬದಲಾಯಿಸಿದೆ. ಇಂದಿನಿಂದ ಬದಲಾಗಿ ನಾಳೆಯಿಂದ ಜಾರಿಯಾಗುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಡಿ.24 ರಿಂದ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಜನವರಿ 2 ರವರೆಗೆ ಕರ್ಪ್ಯೂ ಜಾರಿಯಾಗುತ್ತಿದೆ.

ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ಡಿ.24 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಅಂದರೆ ಮಿಡ್ ನೈಟ್ ಮಾಸ್ ಯಾವುದೇ ಅಡಚಣೆಯಿಲ್ಲದೆ ಮಾಡಬಹುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇದ್ದಕ್ಕಿದ್ದಂತೆ ಇಂದು ಕರ್ಪ್ಯೂ ಜಾರಿ ಮಾಡಿರುವುದರಿಂದ ಅನೇಕ ಸಮಸ್ಯೆಗಳು ತಲೆದೋರಬಹುದು ಹಾಗೂ ವ್ಯಾಪರಸ್ಥರು ಪ್ರಯಾಣಿಕರು ಸೇರಿದಂತೆ ಇತರರಿಗೆ ತೊಂದರೆಯಾಗುತ್ತದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದ್ದು ಹೀಗಾಗಿ ರಾತ್ರಿ ಕರ್ಫ್ಯೂ ಒಂದು ದಿನ ಮುಂದಕ್ಕೆ ಹಾಕಲಾಗಿದೆ. ಈ ಸಂಬಂಧ ಎಫ್ ಕೆಸಿಸಿಐ ಸೇರಿದಂತೆ ಅನೇಕರು ಮನವಿ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!