ಮತಯಾಚನೆಯ ನಿರ್ಬಂಧ ತಿಳಿಸುವಲ್ಲಿ ಸರಕಾರ, ಜಿಲ್ಲಾಡಳಿತವೇ ಗೊಂದಲದಲ್ಲಿದೆ: ಲಾಲಾಜಿ

ಕಾಪು: ಗ್ರಾ.ಪಂ ಚುನಾವಣೆ ವಿಚಾರಕ್ಕೆ ಸಂಬಂದಿಸಿ ಮತಯಾಚನೆಗೆ ಇರುವ ನಿರ್ಬಂಧ ತಿಳಿಸುವಲ್ಲಿ ಸರಕಾರ, ಜಿಲ್ಲಾಡಳಿತವೇ ಗೊಂದಲದಲ್ಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ‌ ಮುಖಂಡರು ಮತಯಾಚನೆ‌ ನಡೆಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಆಕ್ಷೇಪಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಚಿಹ್ನೆ ಇಲ್ಲವಾದರೂ ನಾವು ಮಾಡಿರುವ ಕೆಲಸದ ಆಧಾರದಲ್ಲಿ ನಮ್ಮವರ ಪರವಾಗಿ ಮತಯಾಚನೆ ನಡೆಸುತ್ತೇವೆ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆಯಾದರೂ ಕೊನೆಗೆ ಅಭ್ಯರ್ಥಿ ಗೆದ್ದ ನಂತರ ಪಕ್ಷದ ಬೆಂಬಲದೊಂದಿಗೆ ಅಧಿಕಾರ ನಡೆಸುವುದು ವಾಡಿಕೆಯಾಗಿದೆ.

ಅದರಂತೆ ಗ್ರಾಮದ ಜನರು, ಪಕ್ಷದ ಕಾರ್ಯಕರ್ತರು ನಮ್ಮನ್ನು ಗೆಲ್ಲಿಸಿ, ನಮ್ಮ ಪರವಾಗಿ ಕೆಲಸ ಮಾಡಿದ್ದರು. ಇದೀಗ ನಾವು ಅವರಿಗೆ ಬೆಂಬಲ ನೀಡಿದರೆ ತಪ್ಪೇನಿಲ್ಲ ಎಂದು ಸ್ಪಷ್ಟನೆ‌ ನೀಡಿದರು.  ಜನಪ್ರತಿನಿಧಿಗಳು ಮತಯಾಚನೆಗೆ ತೆರಳ ಬಾರದೆಂದೇನೂ ಇಲ್ಲ. ರಾಜ್ಯಾದ್ಯಂತ ಚುನಾವಣೆಗೆ ಇದೇ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ, ಸರಕಾರವೇ ಪೂರ್ಣ ಗೊಂದಲದಲ್ಲಿದೆ ಎಂದರು.

ಕಾಪು ವಿಧಾನ ಸಭಾ ಕ್ಷೇತ್ರದ  26 ಗ್ರಾಮ ಪಂಚಾಯತ್ ಗಳ ಪೈಕಿ,  ಕ್ಷೇತ್ರದ 23-24 ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಆಡಳಿತದ ನಿರೀಕ್ಷೆಯಲ್ಲಿದ್ದೇವೆ ಎಂದರು.    ಇನ್ನು ಕೋವಿಡ್ 2ನೇ ಅಲೆ ಕುರಿತ ಜಾಗೃತಿ ಕೈಗೊಳ್ಳುವ ವಿಚಾರವಾಗಿ ಮಾತನಾಡಿದ ಅವರ,  ಕೋವಿಡ್  ಎರಡನೇ ಹಂತದ ಅಲೆಯ ಬಗ್ಗೆ ಜನರೇ ಸ್ವತಃ ಜಾಗೃತರಾಗಬೇಕಿದೆ. ಮಹಾರಾಷ್ಟ್ರದಲ್ಲಿ ಜನರು ನಮಗಿಂತ ಹೆಚ್ಚು ಜಾಗೃತರಾಗಿದ್ದಾರೆ.

ನಮಗಿಂತ ಮುಂದುವರೆದ ಇಂಗ್ಲೆಂಡ್ ಈಗಾಗಲೇ ಕಟ್ಟು ನಿಟ್ಟಿನ ಕ್ರಮದ ಮೂಲಕ ಕೊರೊನಾ ಅಲೆಯಿಂದ ಜನರನ್ನು ರಕ್ಷಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆದ್ದರಿಂದ ನಾವು ಸ್ವತಃ ಜಾಗೃತರಾಗಬೇಕಿದೆ ಎಂದರು.

Leave a Reply

Your email address will not be published. Required fields are marked *

error: Content is protected !!