28 ವರ್ಷಗಳ ಹಿಂದೆ ನಡೆದಿದ್ದ ಕ್ರೈಸ್ತ ಸನ್ಯಾಸಿನಿ ಕೊಲೆ ಪ್ರಕರಣ: ಪಾದ್ರಿ, ಸಿಸ್ಟರ್ ತಪ್ಪಿತಸ್ಥರು
ತಿರುವನಂತಪುರ: 28 ವರ್ಷಗಳ ಹಿಂದೆ ನಡೆದಿದ್ದ ಕ್ರೈಸ್ತ ಸನ್ಯಾಸಿನಿ ಅಭಯಾ (21) ಕೊಲೆ ಪ್ರಕರಣದಲ್ಲಿ ಕನಾನಾಯ ಕ್ಯಾಥೋಲಿಕ್ ಧರ್ಮಗುರು ಥಾಮಸ್ ಎಂ.ಕೊಟ್ಟೂರ್, ಸಿಸ್ಟರ್ ಸೆಫಿ ತಪ್ಪಿತಸ್ಥರು ಎಂದು ಇಲ್ಲಿನ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಡಿ.23 ರಂದು ಪ್ರಕಟಿಸಲಿದೆ. ಈ ಪ್ರಕರಣದಲ್ಲಿ ಥಾಮಸ್ ಹಾಗೂ ಸೆಫಿ ಕ್ರಮವಾಗಿ ಮೊದಲ ಹಾಗೂ ಮೂರನೇ ಆರೋಪಿಗಳಾಗಿದ್ದರು. ಎರಡನೇ ಆರೋಪಿ ಜೋಸ್ ಪೂತ್ರಿಕ್ಕಯಿಲ್ ಅವರನ್ನು ಖುಲಾಸೆಗೊಳಿಸಲಾಗಿದೆ. 1992ರ ಮಾರ್ಚ್ 27ರಂದು ಅಭಯಾ ಅವರ ಶವ ಕೊಟ್ಟಾಯಂನಲ್ಲಿರುವ ಸೇಂಟ್ ಪಯಸ್ ಕಾನ್ವೆಂಟ್‌ನ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. ಪ್ರಕರಣದ ವಿವರ: ಅಭಯಾ ಕೊಟ್ಟಾಂಯನ ಬಿಸಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದರು. ಥಾಮಸ್ ಮತ್ತು ಸೆಫಿ ನಡುವೆ ಅನೈತಿಕ ಸಂಬಂಧ ಇತ್ತು. ಈ ಬಗ್ಗೆ ಅಭಯಾಗೆ ತಿಳಿದಿತ್ತು. 1992ರ ಮಾರ್ಚ್ 27ರ ನಸುಕಿನಲ್ಲಿ ಕಾನ್ವೆಂಟ್‌ನ ಕೋಣೆಯೊಂದರಲ್ಲಿ ಇಬ್ಬರೂ ದೈಹಿಕವಾಗಿ ನಿಕಟವಾಗಿದ್ದದ್ದನ್ನು ಅಭಯಾ ನೋಡಿದ್ದರು. ನಂತರ, ನೀರು ಕುಡಿಯುವ ಸಲುವಾಗಿ ಅಡುಗೆ ಮನೆಗೆ ಬಂದಿದ್ದ ಅಭಯಾಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ ಅವರು, ಶವವನ್ನು ಬಾವಿಯಲ್ಲಿ ಎಸೆದಿದ್ದರು ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ. ಕಳವು ಮಾಡಲು ಅದೇ ದಿನ ನಸುಕಿನಲ್ಲಿ ಕಾನ್ವೆಂಟ್‌ಗೆ ನುಗ್ಗಿದ್ದ ರಾಜು ಅಲಿಯಾಸ್ ಅದಯ್ಕ ರಾಜು, ಈ ಪ್ರಕರಣದ ಪ್ರಮುಖ ಸಾಕ್ಷಿ. ಆತ, ಘಟನೆ ನಡೆದ ಸ್ಥಳದಲ್ಲಿ ಇಬ್ಬರು ಧರ್ಮಗುರುಗಳು ಇದ್ದದ್ದನ್ನು ನೋಡಿದ್ದಾಗಿ ಸಾಕ್ಷಿ ನುಡಿದ ಎಂದೂ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. ಈ ಪ್ರಕರಣ ಕುರಿತು ಮೊದಲು ತನಿಖೆ ನಡೆಸಿದ್ದ ಕೇರಳ ಪೊಲೀಸರು, ಇದೊಂದು ಆತ್ಮಹತ್ಯೆ ಎಂದು ಹೇಳಿದ್ದರು. 1994ರಲ್ಲಿ ಸಿಬಿಐಗೆ ತನಿಖೆ ವಹಿಸಲಾಯಿತು. ಇದೊಂದು ಕೊಲೆ ಎಂದು ಸಿಬಿಐ ಹೇಳಿತ್ತಾದರೂ, ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ತಿಳಿಸಿತ್ತು. ಪ್ರಕರಣವನ್ನು ಅಂತ್ಯಗೊಳಿಸಲು ಮೂರುಬಾರಿ ಪ್ರಯತ್ನಿಸಲಾಗಿತ್ತು. ಆದರೆ, ತನಿಖೆ ಮುಂದುವರಿಸುವಂತೆ ಕೋರ್ಟ್ ನಿರ್ದೇಶನ ನೀಡಿದ ಕಾರಣ 15 ವರ್ಷಗಳ ಹಿಂದೆ ಸಿಬಿಐ ತನಿಖೆಯನ್ನು ಮತ್ತೆ ಕೈಗೆತ್ತಿಕೊಂಡಿತು. 2008ರ ನವೆಂಬರ್‌ನಲ್ಲಿ ಆರೋಪಿಗಳನ್ನು ಬಂಧಿಸಿ, 2009ರ ಜುಲೈ 17ರಂದು ಚಾರ್ಜ್‌ಶೀಟ್ ಸಲ್ಲಿಸಿತ್ತು. ಸುದೀರ್ಘಕಾಲ ನಡೆದ ತನಿಖೆ, ವಿಚಾರಣೆ ವೇಳೆ, 133 ಜನರನ್ನು ಸಾಕ್ಷಿಯನ್ನಾಗಿ ಮಾಡಲಾಗಿತ್ತು. ಆದರೆ, ಹಲವರು ಮೃತಪಟ್ಟ ಕಾರಣ, ಕೇವಲ 49 ಜನರು ಮಾತ್ರ ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ನುಡಿದರು. ‘ದೇವರ ಮಧ್ಯಪ್ರವೇಶದಿಂದ ಈ ತೀರ್ಪು’ ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಅಭಯಾಳ ಸಹೋದರ ಬಿಜು, ‘ದೇವರು ನಮ್ಮ ಪ್ರಾರ್ಥನೆಗೆ ಓಗೊಟ್ಟು, ನಮಗೆ ನ್ಯಾಯ ಕೊಡಿಸಿದ್ದಾನೆ. ತನಿಖೆಯನ್ನೇ ಮೊಟಕುಗೊಳಿಸಬೇಕು ಎಂದು ಸಾಕಷ್ಟು ಪ್ರಯತ್ನಗಳು ನಡೆದವು. ಆದರೆ, ದೇವರ ಮಧ್ಯಪ್ರವೇಶದಿಂದ ನಮಗೆ ಈ ತೀರ್ಪು ಲಭಿಸಿದೆ’ ಎಂದು ಹೇಳಿದ್ದಾರೆ. |