ಕೊಲ್ಲೂರು-ಕೊಡಚಾದ್ರಿ ಮಧ್ಯೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ: ಬಿ.ವೈ.ರಾಘವೇಂದ್ರ
ಸಿದ್ದಾಪುರ: ‘ಕೊಲ್ಲೂರು ಕೊಡಚಾದ್ರಿ ರೋಪ್ ವೇ ರಚಿಸುವ ಮುಂಚೆ ಪರಿಸರ ಪ್ರೇಮಿಗಳ ಸಲಹೆ ಸೂಚನೆ ಪಡೆದು, ಯೋಜನೆ ರೂಪಿಸಲಾಗುವುದು’ ಎಂದು ಬೈಂದೂರು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಮಂಗಳವಾರ ಸಿದ್ದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೈಗೊಳ್ಳುವ ಯೋಜನೆಗೆ ಪರ-ವಿರೋಧ ಸಹಜ. ಪ್ರಕೃತಿಗೆ ಹಾನಿಯಾಗದ ರೀತಿಯಲ್ಲಿ ಅವರ ಸಲಹೆ ಪಡೆದು ಪ್ರಕೃತಿ ಸ್ನೇಹಿ ಯೋಜನೆ ರೂಪಿಸುವ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದ ಅವರು ಸಿದ್ದಾಪುರ-ಸೌಕೂರು ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಬೃಹತ್ ₹550 ಕೋಟಿಯ ಯೋಜನೆಯ ಡಿಪಿಆರ್ ಸಿದ್ದಗೊಂಡಿದ್ದು, ಟೆಂಡರ್ ಹಂತದಲ್ಲಿದೆ. ಈ ಭಾಗದಲ್ಲಿ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗುವುದು’ ಎಂದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ನೇಮಕಾತಿ ವಿಳಂಬಕ್ಕೆ ರಾಜಕೀಯ ಹಸ್ತಕ್ಷೇಪವಿದೆಯೆನ್ನುವ ಆರೋಪ ಕೇಳಿಬರುತ್ತಿದೆ ಎನ್ನುವ ಪ್ರಶ್ನೆಗೆ, ‘ ಈ ವಿಚಾರ ಗಮನಕ್ಕೆ ಬಂದಿಲ್ಲ. ಶೀಘ್ರವೇ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಕಸ್ತೂರಿ ರಂಗನ್ ವರದಿಯು ಶೇ 72 ರಷ್ಟು ಭಾಗ ಜನರಿಗೆ ಪೂರಕವಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದರು. ‘ಗ್ರಾಮೀಣ ಭಾಗದ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಪಡೆ ಗ್ರಾಮಪಂಚಾಯಿತಿ ಚುನಾವಣೆಗೆ ಸನ್ನದ್ಧವಾಗಿದೆ. ಸರ್ಕಾರಿ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸುವಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಪ್ರಮುಖ ಪಾತ್ರ ವಹಿಸುವುದರಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ’ ಎಂದರು. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಬಿಜೆಪಿ ಮುಖಂಡರಾದ ಕಿರಣ್ ಕೊಡ್ಗಿ, ಮಲ್ನಾಡ್ ಅಭಿವೃದ್ಧಿ ಸಮಿತಿ ಸದಸ್ಯ ಜಯರಾಮ್ ಭಂಡಾರಿ, ಮಹೇಶ್ ನಾಯ್ಕ್, ಶರತ್ ಶೆಟ್ಟಿ, ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕಾಂಗ್ರೆಸ್ ಕುತಂತ್ರ: ರೈತರ ಹಿತಚಿಂತನೆಯಿಲ್ಲದ ಸಂಘಟನೆಗಳು, ವಿರೋಧ ಪಕ್ಷಗಳು ರೈತ ಮಸೂದೆ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಕಾಯ್ದೆ ರಚಿಸಿದರೆ ಬಿಜೆಪಿ ಲಾಭ ಪಡೆಯುತ್ತದೆ ಎನ್ನುವ ಕಾರಣಕ್ಕೆ ಪಕ್ಷದ ವಿರುದ್ಧ ಷಡ್ಯಂತ್ರ ಹೂಡಲಾಗುತ್ತಿದೆ. ರೈತರ ಆದಾಯ ಹೆಚ್ಚಿಸುವುದರೊಂದಿಗೆ ಸ್ವಾಭಿಮಾನದ ಬದುಕು ಕಲ್ಪಿಸಲು ಕಾಯ್ದೆ ಪೂರಕವಾಗಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. |