ಮತದಾರರು ಯೋಗ್ಯ ಜನಪ್ರತಿನಿಧಿಗಳನ್ನು ಆರಿಸಿ ಗ್ರಾಮ ಸರಕಾರ ಸ್ಥಾಪನೆಗೆ ಕೈಜೋಡಿಸಿ : ಸಚಿವ ಕೋಟ
ಉಡುಪಿ: ಮತದಾರರು ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಸಮಷ್ಠಿಯ ಗ್ರಾಮಾಡಳಿತ ಹಾಗೂ ಗ್ರಾಮ ಸರಕಾರ ಸ್ಥಾಪನೆಗೆ ಕೈಜೋಡಿಸಬೇಕು ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇಂದು ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ, ಪತ್ನಿ ಹಾಗೂ ಮಕ್ಕಳೊಂದಿಗೆ ಕೋಟತಟ್ಟು ಗಾಮ ಪಂಚಾಯತ್ ಕಚೇರಿಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಸಚಿವರು, ಜನಸಾಮಾನ್ಯರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಶ್ರಮಿಸಲು ಈ ಚುನಾವಣೆ ಒಂದು ಅಪೂರ್ವ ಅವಕಾಶವಾಗಿದೆ. ಇದು ಕರ್ನಾಟಕ ರಾಜ್ಯದಲ್ಲಿ 99 ಸಾವಿರ ಜನಪ್ರತಿನಿಧಿಗಳು ಆಯ್ಕೆಯಾಗುವ ಪ್ರಕ್ರಿಯೆಯಾಗಿದ್ದು, ಈ ಅವಕಾಶವನ್ನು ಎಲ್ಲರು ಬಳಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ತಾನು ಮತ ಹಾಕಿದ್ದೇನೆ. ನೀವು ಕೂಡ ಬಂದು ಮತದಾನ ಮಾಡಿ ಎಂದು ಮತದಾರರಿಗೆ ಮನವಿ ಮಾಡಿದರು.