ಬ್ರಿಟನ್ ನಿಂದ ದೆಹಲಿ, ಕೋಲ್ಕತಾಗೆ ಬಂದಿಳಿದ 7 ಮಂದಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ಪತ್ತೆ!
ದೆಹಲಿ: ಬ್ರಿಟನ್ ನಲ್ಲಿ ಹೊಸ ರೂಪದ ಕೊರೋನಾ ವೈರಸ್ ಪತ್ತೆಯಾಗಿ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ ಇದೀಗ ಬ್ರಿಟನ್’ನಿಂದ ಭಾರತಕ್ಕೆ ಬಂದ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಬ್ರಿಟನ್ ನಿಂದ ಭಾರತಕ್ಕೆ ಬಂದ 266 ಮಂದಿ ಪ್ರಯಾಣಿಕರಲ್ಲಿ, ದೆಹಲಿ, ಕೋಲ್ಕತಾದಲ್ಲಿ 7 ಪ್ರಯಾಣಿಕರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.
ಬ್ರಿಟನ್ ನಿಂದ ದೆಹಲಿ ಮತ್ತು ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಸೋಮವಾರ ರಾತ್ರಿ ವಿಮಾನಗಳು ಬಂದಿದ್ದು, ಆ ಪ್ರಯಾಣಿಕರಲ್ಲಿ 7 ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಈ 7 ಮಂದಿಯನ್ನೂ ಪರೀಕ್ಷೆ ನಡೆಸಿದ್ದು, ಮಾದರಿಗಳನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಲಾಗುವುದಾಗಿ ನೋಡಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋಂಕಿತರನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ.
ಬ್ರಿಟನ್ ನಲ್ಲಿ ಹೊಸ ವಿಧದ ಕೊರೊನಾ ಸೋಂಕು ಪತ್ತೆಯಾಗಿದ್ದು, ಅತಿ ವೇಗವಾಗಿ ಹರಡಬಲ್ಲ ಇದರ ಲಕ್ಷಣದಿಂದಾಗಿ ಆತಂಕ ಎದುರಾಗಿದೆ. ಈ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಹಲವು ದೇಶಗಳು ಬ್ರಿಟನ್ ನಿಂದ ಬರುವ ವಿಮಾನಗಳನ್ನು ಸ್ಥಗಿತಗೊಳಿಸಿವೆ.
ಈ ನಡುವೆ ಭಾರತದಲ್ಲೂ ಡಿಸೆಂಬರ್ 31ರವರೆಗೆ ಬ್ರಿಟನ್ ನಿಂದ ಬರುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಸದ್ಯಕ್ಕೆ ಮಂಗಳವಾರ ಬ್ರಿಟನ್ ನಿಂದ ಬಂದವರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಭಾರತಕ್ಕೆ ಬಂದ ಪ್ರಯಾಣಿಕರ ಪೈಕಿ ಒಟ್ಟು ಐದು ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಆದರೆ ಇದು ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೊನಾ ವೈರಸ್ ಹೌದೋ ಅಲ್ಲವೋ ಎಂಬುದರ ಕುರಿತು ತಿಳಿದುಬರಬೇಕಿದ್ದು, ಅಗತ್ಯ ಪರೀಕ್ಷೆಗಳನ್ನು ನಡೆಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.