ಉಡುಪಿ: ಸರಕಾರದ ಮಾರ್ಗಸೂಚಿ ಬಳಿಕ ಮಸೀದಿ ಪುನಾರಂಭದ ಬಗ್ಗೆ ನಿರ್ಧಾರ
ಉಡುಪಿ: ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಕರೋನಾ ಲಾಕ್‌ಡೌನ್ ಕಾರಣಕ್ಕೆ ಮುಚ್ಚಲ್ಪಟ್ಟ ಮಸೀದಿಗಳನ್ನು ಪುನಾರಂಭಿ ಸುವ ಕುರಿತು ಸಾಮುದಾಯಿಕ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಇಂದು ನೇಜಾರು ಜಾಮೀಯ ಮಸೀದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಷಯ ಮಂಡನೆ ಮಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಕೊರೋನ ವೈರಸ್ ಹರಡುವ ವಿಚಾರದಲ್ಲಿ ಮುಸ್ಲಿಮ್ ಸಮುದಾಯದ ವಿರುದ್ಧ ಯಾವುದೇ ರೀತಿಯ ಆರೋಪ ಬಂದರೂ, ಏನೇ ಅವಮಾನ ಮಾಡಿದರೂ ಕೂಡ ಮುಸ್ಲಿಮ್ ಸಂಘಟನೆ, ಮಸೀದಿಗಳು ಹಾಗೂ ಮುಸ್ಲಿಮರು ಲಾಕ್ ಡೌನ್‌ನಿಂದ ಸಂಕಷ್ಟಕ್ಕೀಡಾದ ಬಡವರಿಗೆ ಜಾತಿ ಮತ ಬೇಧ ಇಲ್ಲದೆ ಆಹಾರದ ಕಿಟ್ ಸಹಿತ ಎಲ್ಲ ರೀತಿಯ ಸಹಕಾರ ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸುವ ಮೂಲಕ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ ಎಂದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ 5700 ಆಹಾರದ ಕಿಟ್‌ಗಳನ್ನು ವಿತರಿಸಿದೆ. ಅದೇ ರೀತಿ ಹ್ಯುಮನಿಟೇರಿಯನ್ ರಿಲೀಫ್ ಸೊಸೈಟಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸುನ್ನೀ ಸ್ಟುಡೆಂಟ್ ಫೆಡರೇಶನ್, ತಬ್ಲೀಗ್ ಜಮಾತ್, ದಾವಾ ಸೆಂಟರ್, ಉಡುಪಿ ಜಾಮೀಯ ಮಸೀದಿ, ಶೀಶ್ ತಂಡ ಹಾಗೂ ಸ್ಥಳೀಯ ಎಲ್ಲ ಮಸೀದಿಗಳು ಸಂಕಷ್ಟದಲ್ಲಿದ್ದ ಸರ್ವಧರ್ಮೀಯರಿಗೆ ಊಟ, ತಿಂಡಿ, ಆಹಾರ ಸಾಮಾಗ್ರಿ ವಿತರಿಸಿ ಮಾನವೀಯತೆ ಮೆರೆದಿzರೆ ಎಂದು ಅವರು ಹೇಳಿದರು.
ಇಂದಿನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲವು ಮಸೀದಿಗಳಲ್ಲಿ ಆದಾಯ ಇಲ್ಲ ಮತ್ತು ಸಂಬಳ ಕೊಡಲು ಆಗಲ್ಲ ಎಂಬ ಕಾರಣಕ್ಕಾಗಿ ಇಮಾಮ್, ಮುಅದ್ಸಿನ್, ಆಲಿಮ್‌ಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಈ ರೀತಿ ಮಾಡುವುದು ಅನ್ಯಾಯ. ಕೆಲಸ ಇಲ್ಲದಿದ್ದರೆ ಅವರಾದರೂ ಎಲ್ಲಿ ಹೋಗ ಬೇಕು. ಅವರಿಗೆ ಬೇರೆ ಆದಾಯದ ಮೂಲಗಳೇ ಇಲ್ಲ. ಹಲವು ವರ್ಷಗಳ ಕಾಲ ಮಸೀದಿಗಳಲ್ಲಿ ಸೇವೆ ಸಲ್ಲಿಸಿದ ಅವರನ್ನು ಇಂತಹ ಸಂದರ್ಭದಲ್ಲಿ ನಾವು ಕೈಬಿಡುವುದು ಸರಿಯಲ್ಲ. ಈ ಬಗ್ಗೆ ಪ್ರತಿಯೊಂದು ಜಮಾಅತ್‌ನವರು ಯೋಚಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕೊರೋನ ಭೀತಿಯ ಆರಂಭದ ದಿನಗಳಲ್ಲಿ ಮತ್ತು ಲಾಕ್‌ಡೌನ್ ಸಂದರ್ಭ ದಲ್ಲಿ ಮುಸ್ಲಿಮ್ ಸಮುದಾಯ, ಖಾಝಿಗಳು, ಇಮಾಮ್‌ಗಳು ಬಹಳಷ್ಟು ಸಂಯಮದಿಂದ ಮತ್ತು ಪ್ರಬುದ್ಧತೆಯಿಂದ ಸಾಕಷ್ಟು ನಿರ್ಧಾರಗಳನ್ನು ತೆಗೆದು ಕೊಂಡು ಕೊರೋನ ನಿಯಂತ್ರಣಕ್ಕೆ ಸಹಕಾರ ನೀಡಿದ್ದರು. ಅದೇ ರೀತಿ ಈ ಬಾರಿ ಮಸೀದಿ ಪುನಾರಂಭಿಸುವ ಬಗ್ಗೆಯೂ ಮಸೀದಿ ಜಮಾತ್‌ಗಳು ಬಹಳ ಪ್ರಬುದ್ದತೆಯಿಂದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆಂದು ಅವರು ಹೇಳಿದರು.
ಜೂ.8ರಿಂದ ಜಿಲ್ಲೆಯಲ್ಲಿ ಮಸೀದಿಯನ್ನು ಆರಂಭಿಸುವ ಕುರಿತ ಪರ ಹಾಗೂ ವಿರೋಧ ಅಭಿಪ್ರಾಯಗಳ ವಿಚಾರವನ್ನು ಯಾಸೀನ್ ಮಲ್ಪೆ ಸಭೆಯ ಮುಂದೆ ಇಟ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟರು. ಇದಕ್ಕೆ ಸಂಬಂಧಿಸಿ ಜಿಲ್ಲೆಯ ವಿವಿಧ ಮಸೀದಿಗಳ ಹೊಣೆಗಾರರಾದ ಎಂ.ಪಿ.ಮೊದಿನಬ್ಬ, ಇಸ್ಮಾಯಿಲ್ ಆತ್ರಾಡಿ, ಖತೀಬ್ ರಶೀದ್, ಅಬ್ದುಲ್ ಗಫೂರ್ ಆದಿಉಡುಪಿ, ತಾಜು ದ್ದೀನ್ ಉಪ್ಪಿನಕೋಟೆ, ಮುಹಮ್ಮದ್ ಶೀಶ್, ಸುಬಾನ್ ಹೊನ್ನಾಳ, ಇದ್ರೀಸ್ ಹೂಡೆ, ಮುಹಮ್ಮದ್ ಫೈಝಲ್, ಹುಸೇನ್ ಕೋಡಿಬೆಂಗ್ರೆ ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸಿದರು.
ಜೂ.8ರಂದು ಮಸೀದಿಗಳನ್ನು ಆರಂಭಿಸದೆ, ಮುಂದೆ ಸರಕಾರ ಮಸೀದಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರಕಟಿಸಿದ ಎರಡು ಮೂರು ದಿನಗಳಲ್ಲಿ ಮತ್ತೆ ಪ್ರಮುಖರ ಸಭೆ ಕರೆದು ಚರ್ಚಿಸಿ ಮುಂದಿನ ತೀಮಾನ ತೆಗೆದುಕೊಳ್ಳ ಲಾಗುವುದು. ಇಂದಿನ ಸಭೆಯಲ್ಲಿ ನಡೆದ ಚರ್ಚೆಯ ವಿಚಾರಗಳನ್ನು ಇಲ್ಲಿರುವ ಮಸೀದಿಯ ಹೊಣೆಗಾರರು ತಮ್ಮ ಮಸೀದಿ ಕಮಿಟಿಯ ಮುಂದೆ ಪ್ರಸ್ತಾಪ ಮಾಡಬೇಕು ಎಂದು ಯಾಸೀನ್ ಮಲ್ಪೆ ಅಂತಿಮ ನಿರ್ಣಯವನ್ನು ಸಭೆಯ ಮುಂದೆ ಪ್ರಕಟಿಸಿದರು.
ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ನೇಜಾರು, ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಇಬ್ರಾಹಿಂ ಮಟಪಾಡಿ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ಅರ್ಶದ್ ಅಹ್ಮದ್, ಮೂಳೂರು ಜುಮಾ ಮಸೀದಿ ಅಧ್ಯಕ್ಷ ಎಂ.ಎಚ್.ಬಿ.ಮುಹಮ್ಮದ್, ಎಸ್.ಪಿ.ಉಮ್ಮರ್ ಫಾರೂಕ್, ಅಶ್ಫಾಕ್ ಅಹ್ಮದ್ ಕಾರ್ಕಳ, ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಂಬಾಗಿಲು, ಇಂದ್ರಾಳಿ ನೂರಾನಿ ಮಸೀದಿ ಅಧ್ಯಕ್ಷ ಶಬ್ಬೀರ್ ಅಹ್ಮದ್, ಅಝೀರh ಉದ್ಯಾವರ, ಸಲಾವುದ್ದೀನ್, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ, ಮುಹಮ್ಮದ್ ಗೌಸ್, ಹಸನ್ ಬೈಂದೂರು, ಇಬ್ರಾಹಿಂ ಕೋಟ, ಟಿ.ಎಂ. ಜಫರುಲ್ಲಾ ಹೂಡೆ, ಬಿಎಸ್‌ಎಫ್ ರಫೀಕ್ ಕುಂದಾಪುರ, ಮುನಾಫ್ ಕಂಡ್ಲೂರು, ಶಾಬಾನ್ ಹಂಗ್ಲೂರು ಉಪಸ್ಥಿತರಿದ್ದರು.
ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು. ಒಕ್ಕೂಟದ ಕೋಶಾಧಿಕಾರಿ ಇಕ್ಬಾಲ್ ಎಸ್. ಕಟಪಾಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಕೋವಿಡ್-19 ಇದರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಯಿತು. ೫೦ ಜನರಿಗಿಂತ ಹೆಚ್ಚು ಮಂದಿ ಭಾಗವಹಿಸದೆ ನಿಯಮ ವನ್ನು ಪಾಲಿಸಲಾಯಿತು. ಪ್ರತಿಯೊಬ್ಬರು ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿ ಸುರಕ್ಷಿತ ಅಂತರವನ್ನು ಕಾಪಾಡಿ ಸಭೆಯಲ್ಲಿ ಭಾಗವಹಿಸಿದರು. ಪ್ರವೇಶದಲ್ಲಿ ಪ್ರತಿಯೊಬ್ಬರನ್ನು ಸ್ಕ್ರೀನಿಂಗ್ ಮಾಡಲಾಯಿತು.