ಮಹಿಳೆಯರಿಗೆ ಕಿರುಕುಳವಾದಲ್ಲಿ ಸ್ಥಳೀಯ ದೂರು ಸಮಿತಿಗೆ ದೂರು ನೀಡಿ: ಶ್ಯಾಮಲಾ ಎಸ್.
ಮಂಗಳೂರು: ಮಹಿಳಾ ಸಿಬ್ಬಂದಿಗಳು ಹೆಚ್ಚಾಗಿರುವ ಕಚೇರಿಗಳಲ್ಲಿ ಮಹಿಳೆಯರಿಗೆ ಕಿರುಕುಳ ಉಂಟಾದರೆ ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ ದೂರು ನೀಡುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್ ಸೂಚಿಸಿದರು. ಅವರು ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನಲ್ಲಿ “ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ” ಕುರಿತು ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಭೆಯನ್ನುದ್ಧೇಶಿಸಿ ಮಾತನಾಡಿದರು.
ಸಖಿ ಕೇಂದ್ರದಲ್ಲಿ ಒಂದೇ ಸೂರಿನಡಿ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಕಾನೂನು ನೆರವು, ಪೊಲೀಸ್ ನೆರವು, ತಾತ್ಕಾಲಿಕ ಆಶ್ರಯಗಳನ್ನು ಒದಗಿಸಲಾಗುತ್ತಿದೆ. ಸಖಿ ಕೇಂದ್ರದ ಸ್ವಂತ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡವು ಇಲಾಖೆಗೆ ಹಸ್ತಾಂತರಗೊಂಡ ಕೂಡಲೇ ಉದ್ಘಾಟನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013 ರಡಿ 10 ಕ್ಕಿಂತ ಕಡಿಮೆ ಮಹಿಳಾ ಉದ್ಯೋಗಿಗಳು ಇರುವ ಸರ್ಕಾರಿ, ಖಾಸಗಿ ಕಛೇರಿಗಳು, ನಿಗಮ, ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳು ಇತ್ಯಾದಿ ಎಲ್ಲಾ ಕಛೇರಿಗಳಲ್ಲೂ ಕಡ್ಡಾಯವಾಗಿ ಆಂತರಿಕ ದೂರು ಸಮಿತಿಯನ್ನು ರಚಿಸುವಂತೆ ತಿಳಿಸಿದರು.
ಜಿಲ್ಲಾ ಲೇಡಿಗೋಶನ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಖಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪಡೆದ ಅವರು, ಸಂತ್ರಸ್ಥ ಮಹಿಳೆಯನ್ನು ಭೇಟಿ ಮಾಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಲೇಡಿಗೋಶನ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಶಕುಂತಲಾ ಎಂ.ಎಂ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿಯ ಇಲಾಖೆಯ ಉಪನಿರ್ದೇಶಕ ಪಾಪಭೋವಿ, ಸಖಿ ಕೇಂದ್ರದ ಸೆಂಟರ್ ಅಡ್ಮಿನಿಸ್ಟ್ರೇಟರ್, ಮತ್ತಿತರರು ಉಪಸ್ಥಿತರಿದ್ಧರು.