ಉಡುಪಿ: ಗ್ರಾ.ಪಂ ಚುನಾವಣೆಗೆ ಉತ್ಸಾಹದಿಂದ ಭಾಗವಹಿಸಿದ ಮತದಾರರು
ಉಡುಪಿ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಪ್ರಕ್ರಿಯೆ ಮುಂಜಾನೆಯಿಂದಲೇ ಆರಂಭಗೊಂಡಿದೆ. ತಾಲೂಕಿನಾದ್ಯಂತ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು. ಸುರಕ್ಷತಾ ಕ್ರಮಗಳೊಂದಿಗೆ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುತ್ತಿದ್ದಾರೆ. ಇಂದು ಮುಂಜಾನೆಯಿಂದ ಸಂಜೆ 5 ಗಂಟೆ ವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.
ಬೆಳಿಗ್ಗೆ 9 ಗಂಟೆವರೆಗೆ: ಉಡುಪಿ 15.87, ಹೆಬ್ರಿ 15.47, ಬ್ರಹ್ಮವರ 16.49, ಬೈಂದೂರು 11.49. ಒಟ್ಟು 14.37 ಶೇಕಡಾ ಮತದಾನವಾಗಿದೆ.
67 ಗ್ರಾ.ಪಂಗಳಿಗೆ ಮತದಾನ: ಮೊದಲ ಹಂತದ ಚುನಾವಣೆಯ ಮತದಾನಕ್ಕೆ ಕ್ಷಣಗಣಗೆ ಆರಂಭವಾಗಿದ್ದು, 3,70,234 ಮತದಾರರು ಹಕ್ಕು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಒಟ್ಟು 560 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಉಡುಪಿ, ಬ್ರಹ್ಮಾವರ, ಹೆಬ್ರಿ ಮತ್ತು ಬೈಂದೂರು ತಾಲ್ಲೂಕುಗಳ 67 ಗ್ರಾಮ ಪಂಚಾಯಿತಿಗಳ 1,047 ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. 2,349 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 1,108 ಮಹಿಳೆಯರು, 149 ಎಸ್ಸಿ, 182 ಎಸ್ಟಿ, 543 ಹಿಂದುಳಿದ ‘ಅ’ ವರ್ಗ, 132 ಹಿಂದುಳಿದ ‘ಬ’ ವರ್ಗ ಮತ್ತು 1,343 ಸಾಮಾನ್ಯ ಕ್ಷೇತ್ರದ ಸ್ಪರ್ಧಿಗಳಿದ್ದಾರೆ.