ಗ್ರಾಮ ಪಂಚಾಯತ್ ಚುನಾವಣೆಗೆ ಉಡುಪಿ ಜಿಲ್ಲೆ ಸಜ್ಜು
ಉಡುಪಿ: ನಾಳೆ ಗ್ರಾಮ ಪಂಚಾಯತ್ ಅಂಗಳದಲ್ಲಿ ನಡೆಯಲಿರುವ ಚುನಾವಣಾ ಸಮರಕ್ಕೆ ಉಡುಪಿ ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಳೆ ನಡೆಯಲಿರುವ ಮೊದಲ ಹಂತದ ಚುನಾವಣೆಯ ಅಂಗವಾಗಿ ಇಂದು ಉಡುಪಿ ಬ್ರಹ್ಮಗಿರಿಯಲ್ಲಿರುವ ಸೈಂಟ್ ಸೆಸಿಲಿಯಾ ಶಾಲೆಯಲ್ಲಿ ತಯಾರಿಮಾಡಲಾಗಿದೆ. ನಾಳೆ ಜಿಲ್ಲೆಯ 67 ಗ್ರಾಮ ಪಂಚಾಯಿತ್ಗಳಲ್ಲಿ ಮತದಾನ ನಡೆಯಲಿದ್ದು, ಉಡುಪಿ ತಾಲೂಕಿನಲ್ಲಿ 16, ಬ್ರಹ್ಮಾವರದಲ್ಲಿ 27, ಬೈಂದೂರಿನಲ್ಲಿ 15 ಮತ್ತು ಹೆಬ್ರಿಯಲ್ಲಿ 9 ಗ್ರಾಮ ಪಂಚಾಯತ್ಗಳಿಗೆ ನಾಳೆ ಚುನಾವಣೆ ನಡೆಯಲಿದೆ.
ಜಿಲ್ಲೆಯ ಒಟ್ಟು 556 ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ 448 ಸಾಮಾನ್ಯ, 89 ಸೂಕ್ಷ್ಮ ಮತ್ತು 19 ಅತಿಸೂಕ್ಷ್ಮ ಮತಗಟ್ಟೆಗಳಿವೆ. ಉಡುಪಿಯಲ್ಲಿ 121 ಸಾಮಾನ್ಯ, 28 ಸೂಕ್ಷ್ಮ ಮತ್ತು ಒಂಬತ್ತು ಅತಿಸೂಕ್ಷ್ಮ ಬೂತ್ಗಳನ್ನು ಒಳಗೊಂಡಿರುವ 161 ಮತದಾನ ಕೇಂದ್ರಗಳಿದ್ದು, ಹೆಬ್ರಿಯಲ್ಲಿ 62 ಮತದಾನ ಕೇಂದ್ರಗಳಿವೆ.
ಬೈಂದೂರ್ನಲ್ಲಿ 104 ಸಾಮಾನ್ಯ, 14 ಸೂಕ್ಷ್ಮ ಮತ್ತು 10 ಅತಿಸೂಕ್ಷ್ಮ ಬೂತ್ಗಳು ಸೇರಿದಂತೆ ಒಟ್ಟು 128 ಮತದಾನ ಕೇಂದ್ರಗಳಿವೆ. ಇನ್ನು ಬ್ರಹ್ಮಾವರದಲ್ಲಿ 205 ಮತಗಟ್ಟೆಗಳಿದ್ದು, ಅವುಗಳಲ್ಲಿ 158 ಸಾಮಾನ್ಯ ಮತ್ತು 47 ಸೂಕ್ಷ್ಮ ಮತಗಟ್ಟೆಗಳಿವೆ.
ಮೊದಲ ಹಂತದ ಚುನಾವಣೆ ಹಿನ್ನೆಲೆಯಲ್ಲಿ 68 ಒಟ್ಟು ಚುನಾವಣಾ ಅಧಿಕಾರಿಗಳು,73 ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ನಾಲ್ಕು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಪೈಕಿ ಉಡುಪಿಯಲ್ಲಿ 16 ಚುನಾವಣಾ ಅಧಿಕಾರಿಗಳು ಮತ್ತು 20 ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬ್ರಹ್ಮಾವರದಲ್ಲಿ 27 ಚುನಾವಣಾ ಅಧಿಕಾರಿಗಳು ಮತ್ತು 27 ಸಹಾಯಕ ಚುನಾವಣಾ ಅಧಿಕಾರಿಗಳು, 16 ಚುನಾವಣಾ ಅಧಿಕಾರಿಗಳು ಮತ್ತು ಬೈಂದೂರಿನಲ್ಲಿ 17 ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ಹೆಬ್ರಿಯಲ್ಲಿ ಒಂಬತ್ತು ಚುನಾವಣಾ ಅಧಿಕಾರಿಗಳು ಮತ್ತು ಒಂಬತ್ತು ಸಹಾಯಕ ಚುನಾವಣಾ ಅಧಿಕಾರಿಗಳು ನೇಮಕ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ 1,241 ಸಾಮಾನ್ಯ ಮತ್ತು 1,108 ಮಹಿಳೆಯರು ಸೇರಿದಂತೆ 2,349 ಅಭ್ಯರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 1,82,407 ಪುರುಷರು, 1,94,694 ಮಹಿಳೆಯರು ಮತ್ತು ಇತರೆ ಮತದಾರರು ಸೇರಿ ಒಟ್ಟು 3,77,107 ಮತದಾರರಿದ್ದಾರೆ. ಈ ಪೈಕಿ ಉಡುಪಿಯಲ್ಲಿ 53,159 ಪುರುಷರು ಮತ್ತು 57,281 ಮಹಿಳಾ ಮತದಾರರು ಇದ್ದಾರೆ. ಬ್ರಹ್ಮಾವರದಲ್ಲಿ ೬೬,೬೮೪ ಪುರುಷರು ಮತ್ತು 71,970 ಮತದಾರರು, ಬೈಂದೂರಿನಲ್ಲಿ 42,910 ಪುರುಷರು ಮತ್ತು 44,822 ಮಹಿಳಾ ಮತದಾರರು ಮತ್ತು ಹೆಬ್ರಿಯಲ್ಲಿ 19,654 ಪುರುಷರು ಮತ್ತು 20,621 ಮಹಿಳಾ ಮತದಾರರಿದ್ದಾರೆ.
ಉಡುಪಿ ತಾಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳಿದ್ದು, 329 ಒಟ್ಟು ಹುದ್ದೆಗಳಿವೆ. ಈ ಪೈಕಿ 9 ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, 320 ಹುದ್ದೆಗಳಿಗೆ ಚುನಾವಣೆ ನಡೆಸಲಾಗುವುದು. ಹೆಬ್ರಿ ತಾಲೂಕಿನಲ್ಲಿ 9 ಗ್ರಾಮ ಪಂಚಾಯಿತಿಗಳಿದ್ದು, 122 ಒಟ್ಟು ಹುದ್ದೆಗಳಿವೆ. ಈ ಪೈಕಿ 7 ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, 115 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೈಂದೂರು ತಾಲೂಕಿನಲ್ಲಿ 15 ಗ್ರಾಮ ಪಂಚಾಯಿತಿಗಳಿದ್ದು, 259 ಒಟ್ಟು ಹುದ್ದೆಗಳಿದ್ದು. ಈ ಪೈಕಿ ೮ ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, 251 ಹುದ್ದೆಗಳಿಗೆ ಚುನಾವಣೆ ನಡೆಸಲಾಗುವುದು. ಬ್ರಹ್ಮಾವರ ತಾಲೂಕಿನಲ್ಲಿ 27 ಗ್ರಾಮ ಪಂಚಾಯಿತಿಗಳಿದ್ದು, 412 ಒಟ್ಟು ಹುದ್ದೆಗಳಿದ್ದು, ಈ ಪೈಕಿ 39 ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, 361 ಹುದ್ದೆಗಳಿಗೆ ಚುನಾವಣೆ ನಡೆಯಲಿದೆ.
ಇನ್ನು ಚುನಾವಣೆ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳ ವ್ಯವಸ್ಥೆಮಾಡಲಾಗಿದೆ. ಪ್ರತಿ ತಂಡಕ್ಕೆ ಮಾಸ್ಕ್ ಸೇರಿದಂತೆ, ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನರ್ ಒದಗಿಸಲಾಗಿದೆ. ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಮತದಾನ ಕೇಂದ್ರವನ್ನು ಪರಿಶೀಲಿಸಿದ್ದು,ಡಿ.22ರ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ಕೇಂದ್ರಗಳು ತೆರೆದಿರುತ್ತವೆ. ಇನ್ನು ಜಿಲ್ಲೆಯಾದ್ಯಂತ ಚುನಾವಣೆ ಹಿನ್ನೆಲೆ ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.