ಮುಸ್ಲಿಮರ ವಿರುದ್ಧ ಹೇಳಿಕೆ: ಶೋಭಾ ಕರಂದ್ಲಾಜೆ ರಾಜೀನಾಮೆಗೆ ಆಗ್ರಹ
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭೆ ಸಂಸದೆ ಶೋಭಾ ಕರಂದ್ಲಾಜೆ ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ವಿರುದ್ಧ ತಮ್ಮ ಸ್ಥಾನದ ಘನತೆಗೆ ತೀವ್ರ ಧಕ್ಕೆಯುಂಟು ಮಾಡುವ ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಇತ್ತೀಚಿಗೆ ನಿರಂತರವಾಗಿ ನೀಡುತ್ತಿದ್ದಾರೆ. ಇವರು ಕೂಡಲೇ ತಮ್ಮ ಹೇಳಿಕೆ ಗಳನ್ನು ಹಿಂಪಡೆದು ಮುಸ್ಲಿಂ ಸಮುದಾಯದ ಕ್ಷಮೆ ಯಾಚಿಸಬೇಕು ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಠರಾವನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮಂಡಿಸಿದೆ.
ಒಕ್ಕೂಟದ ವತಿಯಿಂದ ಇಂದು ನೇಜಾರು ಜಾಮೀಯ ಮಸೀದಿಯಲ್ಲಿ ನಡೆದ ಸಮುದಾಯಿಕ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ತೆಗೆದು ಕೊಂಡ ನಿರ್ಣಯದಂತೆ ಈ ಠರಾವು ಮಂಡಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಕೊರೋನ ಸ್ಫೋಟದಿಂದ ಜನ ಸಾಮಾನ್ಯರು ತೀವ್ರ ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಸಂಸದರಾಗಿ ಶೋಭಾ, ಹೇಗೆ ಸ್ಪಂದಿಸಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಜನಪ್ರತಿ ನಿಧಿಯಾಗಿ ತಮ್ಮ ಘೋರ ವೈಫಲ್ಯವನ್ನು ಮುಚ್ಚಿಹಾಕಲು ಶೋಭಾ ಕರಂದ್ಲಾಜೆ, ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ವಿರುದ್ಧ ಆಧಾರರಹಿತ, ಅವಹೇಳನಕಾರಿ, ಕೀಳು ಮಟ್ಟದ ಹೇಳಿಕೆಯನ್ನು ನೀಡುತ್ತಿದ್ದಾರೆ.
ಶುಕ್ರವಾರ ಮತ್ತೆ ಉಡುಪಿಯಲ್ಲಿ ತಬ್ಲೀಗಿಗಳು ಕೊರೋನ ಹರಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಬೇಜವಾ ಬ್ದಾರಿಯುತ, ಸುಳ್ಳು ಹಾಗೂ ಪ್ರಚೋದನಕಾರಿ ಹೇಳಿಕೆಯಾಗಿದೆ. ಕೊರೋನ ವನ್ನು ಇಡೀ ದೇಶಕ್ಕೆ ತಬ್ಲೀಗಿಗಳೇ ಹರಡಿದ್ದಾರೆ ಎಂದು ಶೋಭಾ, ಅವರ ಪಕ್ಷದ ಮುಖಂಡರು, ಸಂಘಪರಿವಾರ ಹಾಗು ಅದನ್ನು ಬೆಂಬಲಿಸುವ ಕೆಲವು ಮಾಧ್ಯಮಗಳು ಮಾಡಿರುವ ಅಪಪ್ರಚಾರ ಎಷ್ಟು ಪೊಳ್ಳು ಎಂಬುದು ಇಡೀ ದೇಶದೆದುರು ಸಾಬೀತಾಗಿದೆ. ತಬ್ಲೀಗಿಗಳ ವಿರುದ್ಧ ಇವರು ಹರಡಿದ ಬಹುತೇಕ ಎಲ್ಲ ವದಂತಿಗಳು ಹಸಿ ಸುಳ್ಳುಗಳು ಎಂದು ಆಧಾರಸಹಿತ ಬೆಳಕಿಗೆ ಬಂದಿವೆ.
ಲಾಕ್‌ಡೌನ್ ಉಲ್ಲಂಘನೆ ಯನ್ನು ಧರ್ಮ, ಜಾತಿ ಎಂಬ ಭೇದವಿಲ್ಲದೆ ದೇಶ, ರಾಜ್ಯದ ವಿವಿಧೆಡೆ ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ಮಾಡಿದ್ದಾರೆ. ಎಲ್ಲ ಧರ್ಮಗಳ ಧಾರ್ಮಿಕ ಸ್ಥಳಗಳಲ್ಲೂ ಲಾಕ್‌ಡೌನ್ ಉಲ್ಲಂಘಿಸಿ ಪೂಜಾ ಕಾರ್ಯಕ್ರಮಗಳು, ಜಾತ್ರೆಗಳು ಇತ್ಯಾದಿ ನಡೆದ ವರದಿಗಳು ಹಲವು ಬಂದಿವೆ. ಸ್ವತಃ ಶೋಭಾ ಅವರ ಪಕ್ಷದ ಹಿರಿಯ ಮುಖಂಡರು, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಲಾಕ್‌ಡೌನ್ ಉಲ್ಲಂಘಿಸಿದ ವರದಿಗಳನ್ನು ನಾವೆಲ್ಲರೂ ನೋಡಿದ್ದೇವೆ. ಇನ್ನು ರಾಜ್ಯದೆಲ್ಲೆಡೆ ಮುಸ್ಲಿಮರು ಲಾಕ್‌ಡೌನ್ ನಿಯಮಗಳನ್ನು ಪಾಲಿಸಿ ಸರಕಾರಕ್ಕೆ ಪೂರ್ಣ ಸಹಕಾರ ನೀಡಿದ್ದಾರೆ.
ತಮಗೆ ಅತ್ಯಂತ ಮುಖ್ಯವಾದ ಸಾಮೂಹಿಕ ನಮಾಜ್, ಜುಮಾ ನಮಾಜ್ಗಳನ್ನೇ ಕಳೆದ ಸುಮಾರು ಮೂರು ತಿಂಗಳಿಂದ ಬಿಟ್ಟು ಸಹಕರಿಸಿದ್ದಾರೆ. ರಮಝಾನ್‌ನಲ್ಲೂ, ಕೊನೆಗೆ ಈದ್ ದಿನವೂ ಮಸೀದಿಗೆ ಹೋಗದೆ ಮನೆಯಲ್ಲೇ ನಮಾಜ್ ಮಾಡಿದ್ದಾರೆ. ಈದ್ ದಿನವೂ ಲಾಕ್ಡೌನ್ ಮಾಡಿದ್ದಕ್ಕೆ ಅದಕ್ಕೂ ಸಹಕರಿಸಿದ್ದಾರೆ. ಜೊತೆಗೆ ಸಂಕಷ್ಟ ದಲ್ಲಿದ್ದ ಸರ್ವಧರ್ಮೀಯರಿಗೆ ಊಟ, ತಿಂಡಿ, ಆಹಾರ ಸಾಮಾಗ್ರಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ, ಮುಸ್ಲಿಂ ಸಮುದಾಯದ ವಿರುದ್ಧ ಇತರ ಧರ್ಮೀಯರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿರುವ ಸಂಸದರ ಈ ಅಪಾಯಕಾರಿ ಧೋರಣೆ ಹಾಗು ಅವರು ನೀಡುತ್ತಿರುವ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.
ಜನಪ್ರತಿನಿಧಿಯಾಗಿ ಪಾಲಿಸಬೇಕಾದ ರಾಜಧರ್ಮ ವನ್ನು ಶೋಭಾ ಅವರು ಮರೆತುಬಿಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳ ಮೂಲಕ ಮನ್ನಣೆ ಗಳಿಸುವುದು ಏನೆಂದು ಅವರಿಗೆ ಗೊತ್ತೇ ಇಲ್ಲ. ಅವರ ರಾಜಕೀಯ ನಿಂತಿರುವುದೇ ಜನರ ನಡುವೆ ದ್ವೇಷ ಹರಡುವುದರ ಮೇಲೆ. ಯಾವುದೇ ವಿಷಯದಲ್ಲಿ ಧರ್ಮದ್ವೇಷ ಎಳೆದು ತಂದು ಸಮಾಜದಲ್ಲಿ ಅಶಾಂತಿ ಸ್ರಷ್ಟಿಸಿ ಲಾಭ ಮಾಡಿಕೊಳ್ಳುವುದು ಅವರ ಚಾಳಿ. ಇಂತಹ ಪ್ರಯತ್ನದಲ್ಲಿ ಅವರು ಹಸಿ ಸುಳ್ಳು ಹೇಳಿ ಹಲವು ಬಾರಿ ನಗೆಪಾಟಲಿಗೀಡಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಣಿ ಸುಳ್ಳುಗಳ ಮೂಲಕ ಗಲಭೆ ಹರಡಲು ಕಾರಣರಾದ ಕುಖ್ಯಾತಿ ಅವರಿಗಿದೆ. ಕೇಂದ್ರ ಗ್ರಹ ಸಚಿವರಿಗೇ ಸುಳ್ಳು ಮಾಹಿತಿ ನೀಡಿದ ಸಂಸದೆ ಎಂಬ ದಾಖಲೆ ಅವರದ್ದು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಮಂಡಿಸಿರುವ ಠರಾವಿನಲ್ಲಿ ತಿಳಿಸಲಾಗಿದೆ.