ಅಜೆಕಾರು: ಅರ್ಬಿ ಮುಂಡ್ಲಿ ಫಾಲ್ಸ್ ನಲ್ಲಿ ಯುವಕನ ಸಂಶಯಾಸ್ಪದ ಸಾವು
ಅಜೆಕಾರು: ನೀರಿನಲ್ಲಿ ಮುಳುಗಿ ಸಂಶಯಾಸ್ಪದ ರೀತಿಯಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳದ ಕೆರ್ವಾಶೆಯ ಸಮೀಪದ ಅರ್ಬಿ ಮುಂಡ್ಲಿ ಫಾಲ್ಸ್ ನಲ್ಲಿ ನಡೆದಿದೆ. ಕಿರಣ್ (21) ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಯುವಕ. ಐದು ಮಂದಿ ಗೆಳೆಯರ ತಂಡವೊಂದು ಭಾನುವಾರ ಇಲ್ಲಿನ ಅರ್ಬಿ ಫಾಲ್ಸ್ ಗೆ ಭೇಟಿ ನೀಡಿತ್ತು.
ಈ ವೇಳೆ ಗೆಳೆಯರೆಲ್ಲಾ ನೀರಿನಲ್ಲಿ ಸ್ನಾನ ಮಾಡುತ್ತಿರುವಾಗ , ತನಗೆ ಟಾಯ್ಲೆಟ್ ಬರುತ್ತಿರುವುದಾಗಿ ಹೇಳಿ ನೀರಿನ ಇನ್ನೊಂದು ಬದಿಗೆ ಹೋದ ಕಿರಣ್ ಸುಮಾರು ಹೊತ್ತಾದರೂ ಹಿಂದಿರುಗಿಲ್ಲ. ಇದನ್ನು ಗಮನಿಸಿದ ಯುವಕರ ತಂಡ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲೂ ಕಿರಣ್ ಪತ್ತೆಯಾಗಿಲ್ಲ.
ಈ ಬಗ್ಗೆ ಹತ್ತಿರದ ಮನೆಯ ಸುನೀಲ್ ಶೆಟ್ಟಿ ಎಂಬವರಿಗೆ ತಿಳಿಸಿದಾಗ ಅವರು ತಮ್ಮ ಪರಿಚಯದ ಅಕ್ಷಯ್ ಕುಮಾರ್, ಧರ್ಮರಾಜ್ ಹೆಗ್ಡೆ ಮತ್ತು ಸುಜೀತ ಶೆಟ್ಟಿ ಸ್ಥಳಕ್ಕೆ ತೆರಳಿ ಹುಡುಕಾಡಿದ್ದಾರೆ. ಬಳಿಕ ಕಿರಣ್ ನೀರಿನಲ್ಲಿ ಮುಳುಗಿರುವ ಸಾದ್ಯತೆ ಇದೆ ಎಂದು ಶಂಕಿಸಿ ಮುಳುಗು ತಜ್ಞರಾದ ಮಯ್ಯದ್ದಿ ಹಾಗೂ ತೇಜಸ್ರನ್ನು ಕರೆಸಿ ನೀರಿನಲ್ಲಿ ಹುಡುಕಾಟ ನಡೆಸಿದ್ದು, ರಾತ್ರಿ 8.35ರ ಸುಮಾರಿಗೆ ಕಿರಣ್ ಅವರ ದೇಹವನ್ನು ಮೇಲಕ್ಕೆ ತರಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.