ಸರಳ ಕ್ರಿಸ್ಮಸ್ ಆಚರಣೆ: ಉಡುಪಿ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ
ಉಡುಪಿ: ಕೋವಿಡ್–19 ಸಂಪೂರ್ಣ ದೂರವಾಗದ ಹಿನ್ನೆಲೆಯಲ್ಲಿ ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದಿಂದ ನಗರದ ಶೋಕಮಾತ ಇಗರ್ಜಿಯಲ್ಲಿ ಹಮ್ಮಿಕೊಂಡಿದ್ದ ಕ್ರಿಸ್ಮಸ್ ಸ್ನೇಹಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಷಪ್, ‘ಕ್ರೈಸ್ತರು ಸರಳವಾಗಿ ಕ್ರಿಸ್ಮಸ್ ಆಚರಿಸುವಂತೆ ಕರೆ ನೀಡಲಾಗಿದೆ. ಹಬ್ಬದಿಂದ ಉಳಿತಾಯವಾದ ಹಣವನ್ನು ಬಡವರಿಗೆ ಹಂಚಲು ತಿಳಿಸಲಾಗಿದೆ ಎಂದರು. ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳನ್ನು ದಾಟಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪಸರಿಸಬೇಕು. ಹೊಸ ಚಿಂತನೆ ಹಾಗೂ ನೂತನ ದೃಷ್ಟಿಕೋನ ಇಂದಿನ ಅಗತ್ಯ. ಕೊರೊನಾ ಸಂಕಷ್ಟದ ಸಮಯದಲ್ಲಿ ವೈದ್ಯರು, ಶುಶ್ರೂಷಕರು, ಪೊಲೀಸರು, ಆರೋಗ್ಯ ಕಾರ್ಯಕರ್ತರು ಕೋವಿಡ್ ವಿರುದ್ಧ ಸಮರ್ಥವಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಪತ್ರಕರ್ತರು ಕೂಡ ಕೋವಿಡ್ ಸೇನಾನಿಗಳಂತೆ ಕರ್ತವ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಪತಿ ಹೆಗ್ಡೆ ಹಕ್ಲಾಡಿ, ಉದಯ್ ಪಡಿಯಾರ್, ಬ್ಯಾರಿ ಅಕಾಡೆಮಿ ಸದಸ್ಯ ನಜೀರ್ ಪೊಲ್ಯ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್ ಅವರ ‘ಚೇತನ ಚಿಂತನ’ ಪುಸ್ತಕ ಬಿಡುಗಡೆಯಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಶೋಕಮಾತ ಚರ್ಚ್ನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಚೇತನ್ ಲೋಬೊ, ಮಾಧ್ಯಮ ಸಮನ್ವಯಕಾರ ಮೈಕಲ್ ರೋಡ್ರಿಗಸ್ ಉಪಸ್ಥಿತರಿದ್ದರು. |