ಗಲಭೆ ಸೃಷ್ಟಿಸಲು ಕಾಂಗ್ರೆಸ್ ತಂತ್ರಗಾರಿಕೆ- ನಳಿನ್ ಕುಮಾರ್
ಬೆಂಗಳೂರು: ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇಲ್ಲದ ವೇಳೆ ಗಲಭೆ ಮಾಡಿಸುವ ತಂತ್ರ ಅನುಸರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಬೆಂಗಳೂರಿನ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ಭಾನುವಾರ ನಡೆದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಟೀಲ್, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದ ವೇಳೆ ಗಲಭೆ ಮಾಡಿಸುವ ತಂತ್ರ ಅನುಸರಿಸುತ್ತದೆ. ನರೇಂದ್ರ ಮೋದಿ ಅವರ ಅಧಿಕಾರವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಿ.ಎ.ಎ.ಗೆ ಸಂಬಂಧಿಸಿ ಗಲಭೆಗಳನ್ನು ಸೃಷ್ಟಿಸಿತು. ಬೆಂಕಿ ಹಾಕುವ ಕಾಂಗ್ರೆಸ್ ಯತ್ನ ಫಲ ಕೊಡಲಿಲ್ಲ. ಬಳಿಕ ತಬ್ಲಿಘಿಗಳ ಜೊತೆ ಸೇರಿ ಗಲಭೆ ಸೃಷ್ಟಿಗೆ ಮುಂದಾಯಿತು ಎಂದು ಟೀಕಿಸಿದರು.
ರಾಜ್ಯದಲ್ಲಿ ರೈತಪರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಪ್ರಿಯತೆಯನ್ನು ಸಹಿಸದ ಕಾಂಗ್ರೆಸ್ ಪಕ್ಷವು ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಕಾರಣವಾಯಿತು ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಮೇಲೆ ಗೌರವ ಮತ್ತು ನಂಬಿಕೆ ಇಲ್ಲ. 17 ಜನ ಶಾಸಕರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದ ವೇಳೆ ವಿಧಾನಸಭೆಯ ಹೊರಗೆ ಸುಧಾಕರ್ ಅವರನ್ನು ಎಳೆದು ಗಲಭೆ ಮಾಡಿತ್ತು. ಈಗ ಅದು ವಿಧಾನಪರಿಷತ್ತಿನೊಳಗೇ ಗಲಾಟೆ ಮಾಡಿ ತನಗೆ ಸಂವಿಧಾನದ ಮೇಲೆ ನಂಬಿಕೆ ಹಾಗೂ ಗೌರವ ಇಲ್ಲದಿರುವುದನ್ನು ಸಾಬೀತುಪಡಿಸಿದೆ. ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.