ಖಾಸಗಿ ಶಾಲೆಗಳ ಜೊತೆಗೆ ರಾಜ್ಯದ ಬಿಜೆಪಿ ಸರ್ಕಾರ ಶಾಮೀಲು- ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ಖಾಸಗಿ ಶಾಲೆಗಳ ಜೊತೆಗೆ ಶಾಮೀಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲದಂತಾಗಿದೆ. ತರಗತಿಗಳಿಲ್ಲದೆ ಇದ್ದರೂ ಪೋಷಕರಿಂದ ಪೂರ್ಣಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ ಪೋಷಕರನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಸರ್ಕಾರ ಕಣ್ಣುಮುಚ್ಚಿಕೊಂಡು ಕೂತಿದೆ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ .
ತರಗತಿಗಳು ನಡೆಯದೆ ಇದ್ದರೂ ಬೋದನಾ ಶುಲ್ಕದ ಜೊತೆಯಲ್ಲಿ ಪ್ರಯೋಗಶಾಲೆ, ಲೈಬ್ರೆರಿ ಮತ್ತಿತರ ಪಠ್ಯೇತರ ಶುಲ್ಕ ವಸೂಲಿಗೆ ಹೊರಟಿರುವ ಖಾಸಗಿ ಶಾಲೆಗಳು ಸರ್ಕಾರದ ಪೊಳ್ಳು ಬೆದರಿಕೆಗೆ ಜಗ್ಗುತ್ತಿಲ್ಲ ಎಂದಿದ್ದಾರೆ.
ಶಾಲೆ ಪುನರಾರಂಭದ ಬಗ್ಗೆ ಸರಣಿ ಸಭೆಗಳು ನಡೆಯುತ್ತಿದ್ದು, ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳ ತರಹೇವಾರಿ ಹೇಳಿಕೆಗಳು ಪೋಷಕರನ್ನು ಗೊಂದಲಕ್ಕೆ ನೂಕಿವೆ. ತಕ್ಷಣ ಸಚಿವ ಸುರೇಶ್ ಕುಮಾರ್ ಖಾಸಗಿ ಶಾಲೆಗಳು ಮತ್ತು ಪೋಷಕರ ಸಭೆ ಕರೆದು ಪಾರದರ್ಶಕವಾಗಿ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.