ಮರವಂತೆ ಬಡಾಕೆರೆ ಸಹಕಾರಿ ಸಂಘಕ್ಕೆ ರೂ.70 ಲಕ್ಷ ಲಾಭ: ಅಧ್ಯಕ್ಷ ರಾಜು ಪೂಜಾರಿ
ಬೈಂದೂರು: ‘ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಹಿಂದಿನ ವರ್ಷ ರೂ.200 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ, ರೂ. 70.09 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು.
ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಶನಿವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೂ. 32.73 ಕೋಟಿ ಠೇವಣಿ ಸಂಗ್ರಹಿಸಿ, ರೂ. 30.51 ಕೋಟಿ ಸಾಲ ನೀಡಿದೆ. ಅದರಲ್ಲಿ ರೂ.6.1 ಕೋಟಿ ಕೃಷಿ ಸಾಲ. 205 ಸ್ವಸಹಾಯ ಸಂಘಗಳನ್ನು ರಚಿಸಿದ್ದು, ಅವು ರೂ. 50.11 ಲಕ್ಷ ಠೇವಣಿ ಸಂಗ್ರಹಿಸಿವೆ’ ಎಂದರು.
‘ನಾವುಂದದಲ್ಲಿರುವ ಸಂಘದ ಪ್ರಧಾನ ಕಚೇರಿ, ಹೇರೂರು, ಬಡಾಕೆರೆ ಶಾಖೆಗಳು ಸ್ವಂತ ನಿವೇಶನ, ಕಟ್ಟಡ ಹೊಂದಿವೆ. ಮರವಂತೆಯಲ್ಲಿ ರೂ.50 ಲಕ್ಷ ವೆಚ್ಚದಲ್ಲಿ ಕಚೇರಿ ನಿರ್ಮಾಣವಾಗುತ್ತಿದೆ. ಸಂಘ ದುರ್ಬಲವಾಗಿದ್ದಾಗ ಅಧ್ಯಕ್ಷನಾದ ನಾನು ಆ ಹುದ್ದೆಯಲ್ಲಿ ನಿರಂತರ 25 ವರ್ಷ ದುಡಿದಿದ್ದು, ಸಂಘದ ಬೆಳವಣಿಗೆಗೆ ನಿರ್ದೇಶಕರು, ಸಿಬ್ಬಂದಿ ಮತ್ತು ಸದಸ್ಯರು ಕಾರಣ’ ಎಂದು ಕೃತಜ್ಞತೆ ಸಲ್ಲಿಸಿದರು.
ಸದಸ್ಯರಾದ ಸಂಜೀವ ಗಾಣಿಗ ಮತ್ತು ಬಿ. ಎ. ಸಯ್ಯದ್ ಕೆಲವು ಸಲಹೆಗಳನ್ನು ನೀಡಿದರು. ಸುಷ್ಮಿತಾ ಮೊಗವೀರ ಪ್ರಾರ್ಥಿಸಿದರು. ನಿರ್ದೇಶಕ ಎಂ. ವಿನಾಯಕ ರಾವ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ವರದಿ, ಆಯವ್ಯಯ ಮಂಡಿಸಿದರು. ಹಿರಿಯ ಸಿಬ್ಬಂದಿ ಸಂಜೀವ ಮಡಿವಾಳ ವಂದಿಸಿದರು. ಮರವಂತೆ ಶಾಖಾಧಿಕಾರಿ ಸೋಮಯ್ಯ ಬಿಲ್ಲವ ನಿರೂಪಿಸಿದರು.
ಉಪಾಧ್ಯಕ್ಷ ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪೂಜಾರಿ, ನರಸಿಂಹ ದೇವಾಡಿಗ, ರಾಮೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜಾ ಗಾಣಿಗ, ಅಶೋಕಕುಮಾರ ಶೆಟ್ಟಿ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಉಪಸ್ಥಿತರಿದ್ದರು.