ಬಾಲಕಾರ್ಮಿಕ/ಕಿಶೋರ ಕಾರ್ಮಿಕರ ನೇಮಕ ಅಪರಾಧ
ಉಡುಪಿ, ಡಿ.19: ಜಿಲ್ಲೆಯಲ್ಲಿ ಕೋವಿಡ್-19 ರ ಹಿನ್ನೆಲೆ ಆರ್ಥಿಕ ಮತ್ತು ಕಾರ್ಮಿಕ
ಮಾರುಕಟ್ಟೆಯ ಆಘಾತವು ಜನರ ಜೀವನ ಹಾಗೂ ಜೀವನೋಪಾಯದ ಮೇಲೆ ಪರಿಣಾಮ ಬೀರಿದ್ದು, ಈ ಬಿಕ್ಕಟ್ಟು ಸಾವಿರಾರು ದುರ್ಬಲ ಮಕ್ಕಳನ್ನು ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಗೆ ತಳ್ಳಬಹುದಾದುರಿಂದ ಹೋಟೆಲ್, ಬಾರ್,
ಅಂಗಡಿಗಳಲ್ಲಿ ದುಡಿಸಿಕೊಳ್ಳುತ್ತಿರುವ ಸಾಧ್ಯತೆಗಳಿರುತ್ತದೆ.
ಆದ್ದರಿಂದ ಬಾಲ್ಯಾವಸ್ಥೆಯ/ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನೇಮಕವಾಗದಂತೆ ಕ್ರಮವಹಿಸಲು ಕಾರ್ಮಿಕ ಇಲಾಖೆ, ಉಡುಪಿ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಉಡುಪಿ ಇವರ ಸಹಭಾಗಿತ್ವದಲ್ಲಿ ಈಗಾಗಲೇ ಜಿಲ್ಲೆಯ
ಎಲ್ಲಾ ತಾಲ್ಲೂಕಿನಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಅನಿರೀಕ್ಷಿತ ತಪಾಸಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗೂ ಅನೀರಿಕ್ಷಿತ ತಪಾಸಣೆ ನಡೆಸಿದ ಸಂದರ್ಭದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)
ತಿದ್ದುಪಡಿ ಕಾಯ್ದೆ 2016ರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಕಾಯ್ದೆಯ ಪ್ರಕಾರ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಸಂಪೂರ್ಣ ನಿಷೇಧಿಸಲಾಗಿದೆ. 15 ರಿಂದ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸಿದೆ. ಬಾಲಕಾರ್ಮಿಕ/ಕಿಶೋರ ಕಾರ್ಮಿಕರನ್ನು
ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿ0ದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20,000 ರೂ. ದಿಂದ 50,000 ರೂ. ವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಈ ಕಾಯ್ದೆಯಡಿ ಅವಕಾಶವಿರುತ್ತದೆ.
14 ವರ್ಷದೊಳಗಿನ ಮಕ್ಕಳನ್ನು ಹಾಗೂ 15 ರಿಂದ 18 ವರ್ಷದೊಳಗಿನ ವಯಸ್ಸಿನ ಕಿಶೋರ ಕಾರ್ಮಿಕರನ್ನು ದುಡಿಸುತ್ತಿದ್ದಲ್ಲಿ ಮಾಹಿತಿಯನ್ನು ಚೈಲ್ಡ್ ಲೈನ್ 1098 ಅಥವಾ 0820-2574851/ 0820-2574977 ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ
ತಿಳಿಸಬಹುದಾಗಿದೆ ಎಂದು ಕಾರ್ಮಿಕ ಅಧಿಕಾರಿ ಕುಮಾರ್.ಬಿ.ಆರ್ ತಿಳಿಸಿರುತ್ತಾರೆ.