ಕೆರೆ, ರಸ್ತೆ ಅತಿಕ್ರಮಣ ಪ್ರಕರಣಗಳನ್ನು ಗುರುತಿಸಿ, ತಕ್ಷಣ ವಿಲೇವಾರಿ ಮಾಡಿ: ಉಪ ಲೋಕಾಯುಕ್ತ ಬಿ.ಎಸ್.ಪಾಟೀಲ್

ಉಡುಪಿ, ಡಿ.19: ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ , ಅವರ ಕೋರುವ
ಸೇವೆಗಳನ್ನು ವಿಳಂಬಕ್ಕೆ ಆಸ್ಪದ ನೀಡದೇ ಸೂಕ್ತ ಸಮಯದಲ್ಲಿ ಒಗದಿಸುವುದರ ಮೂಲಕ ಆಡಳಿತ ಸುಧಾರಣೆಯಲ್ಲಿ ಪ್ರಗತಿ ಸಾಧಿಸುವುದರ ಜೊತೆಗೆ ಪಾರದರ್ಶಕತೆ ತರುವಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯೋನ್ಮೂಖರಾಗುವಂತೆ ಕರ್ನಾಟಕ
ಲೋಕಾಯುಕ್ತದ ಉಪ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸೂಚಿಸಿದರು. ಅವರು ಶನಿವಾರ, ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಲೋಕಾಯುಕ್ತಕ್ಕೆ ಸಂಬoದಿಸಿದoತೆ ಜಿಲ್ಲೆಯಲ್ಲಿ ಬಾಕಿ ಇರುವ ಪ್ರಕರಣಗಳ ಪರಿಶೀಲನೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅಧಿಕಾರಿಗಳು ತಮ್ಮ ಇಲಾಖೆಯಲ್ಲಿನ ಸಾರ್ವಜನಿಕರ ಕಾರ್ಯಗಳನ್ನು ಶೀಘ್ರದಲ್ಲಿ ಮಾಡಿಕೊಡಬೇಕು, ಅರ್ಜಿಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡಬೇಡಿ, ಸೂಕ್ತ ಕಾರಣಗಳಿಲ್ಲದೆ ಅರ್ಜಿಗಳ ತಿರಸ್ಕಾರ ಮಾಡಬೇಡಿ, ಅರ್ಹವ್ಯಕ್ತಿಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಅನರ್ಹರಿಗೆ ಮಂಜೂರು ಮಾಡಬೇಡಿ, ಸಾರ್ವಜನಿಕ ಆಸ್ತಿಯ ರಕ್ಷಣೆ
ಮತ್ತು ಅದರ ಬೆಳವಣಿಗೆಗೆ ಕಾರ್ಯನಿರ್ವಹಿಸಬೇಕು, ಉತ್ತಮವಾಗಿ ಕಾರ್ಯನಿರ್ವಹಿಸುವ ನೌಕರರನ್ನು ಪ್ರೋತ್ಸಾಹಿಸಿ, ಕರ್ತವ್ಯದಲ್ಲಿ ದಕ್ಷತೆಯನ್ನು ರೂಢಿಸಿಕೊಳ್ಳುವಂತೆ ನ್ಯಾ. ಬಿ.ಎಸ್.ಪಾಟೀಲ್ ತಿಳಿಸಿದರು.

ಕೆರೆ, ರಸ್ತೆ ಅತಿಕ್ರಮಣ ಪ್ರಕರಣಗಳನ್ನು ಗುರುತಿಸಿ, ಕೂಡಲೇ ಅವುಗಳನ್ನು ವಿಲೇವಾರಿ ಮಾಡಿ. ತಮ್ಮ ಕಚೇರಿಗಳಲ್ಲಿ ಇಂತಹ ಪ್ರಕರಣಗಳಿದ್ದಲ್ಲಿ ಲೋಕಾಯುಕ್ತ ಕಚೇರಿಗೆ ವಿವರವಾದ ಮಾಹಿತಿ ಮತ್ತು ಛಾಯಾಚಿತ್ರಗಳೊಂದಿಗೆ ಫೆಬ್ರವರಿ ಅಂತ್ಯದೊಳಗೆ ಇಂತಹ ಪ್ರಕರಣಗಳ ವಿವರಗಳನ್ನು ನೀಡುವಂತೆ ಸೂಚಿಸಿದ ಉಪ ಲೋಕಾಯುಕ್ತರು , ನಗರ
ಸ್ಥಳಿಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ವಿಧಿಸಲಾಗುವ ಷರತ್ತುಗಳ ಪಾಲನೆಯಾಗುತ್ತಿರುವ ಕುರಿತು, ಸದ್ರಿ ನಿರ್ಮಾಣ ಹಂತದಲ್ಲೇ ಪರಿಶೀಲನೆ ನಡೆಸಿ ನೋಟಿಸ್ ನೀಡಿ, ಕಟ್ಟಡ ಮುಕ್ತಾಯವಾದ ಸಂದರ್ಭದಲ್ಲಿ ಉಲ್ಲಂಘನೆಯಾದ ಕುರಿತು ನೋಟಿಸ್ ನೀಡಿದಲ್ಲಿ,ಇಂತಹ ಪ್ರಕರಣಗಳ
ವಿಲೇವಾರಿ ತ್ವರಿತವಾಗಿ ಮಾಡಲು ಸಾಧ್ಯವಾಗುವುದಿಲ್ಲ, ಭೂ ಸ್ವಾಧೀನ ಸಂದರ್ಭದಲ್ಲಿ ಎಲ್ಲಾ ರೀತಿಯ ನಿಯಮಗಳನ್ನು ಅನುಸರಿಸಿ , ಸಂಬoದಪಟ್ಟ ವ್ಯಕ್ತಿಗೆ ಸೂಕ್ತ ಪರಿಹಾರ ವಿತರಿಸುವಂತೆ ಸೂಚನೆ ನೀಡಿದರು.

ಗ್ರಾಮ ಪಂಚಾಯತ್ ಗಳ ಪಿಡಿಓ, ಕಾರ್ಯದರ್ಶಿಗಳ ವಿರುದ್ದ ಆಡಿಟ್ ಅಕ್ಷೇಪಣೆಗಳನ್ನು ಪಾಲಿಸದಿರುವ ಕುರಿತು ಸಾಕಷ್ಟು ದೂರುಗಳು ದಾಖಲಾಗಿದ್ದು, ಆಡಿಟ್ ವರದಿಯಲ್ಲಿ ಸ್ಪಷ್ಟವಾಗಿ ನಷ್ಠದ ಬಾಬ್ತು ವಸೂಲಿ ಮಾಡುವಂತೆ ಸೂಚನೆ ನೀಡಿದ್ದರೂ ಸಹ , ವಸೂಲಾತಿ ನಡೆಯುತ್ತಿಲ್ಲ ಎಲ್ಲಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ
ಅಗತ್ಯ ಕ್ರಮ ಕೈಗೊಳ್ಳುವಂತೆ ಉಪ ಲೋಕಾಯುಕ್ತರು ಸೂಚಿಸಿದರು.

ಉಡುಪಿ ಜಿಲ್ಲೆಯಲ್ಲಿ ಪ್ರತೀ ಶನಿವಾರ, ಗ್ರಾಮ ಪಂಚಾಯತ್ ಗಳಲ್ಲಿ ಬಾಕಿ ಇರುವ ಆಡಿಟ್ ಆಕ್ಷೇಪಣೆಗಳ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಪಂಚಾಯತ್ ಮೂಲಕ ವಿಚಾರಣೆ ನಡೆಸಲಾಗುತ್ತಿದ್ದು, ಸಂಬoದಪಟ್ಟ ಪಿಡಿಓ ಮತ್ತು ಕಾರ್ಯದರ್ಶಿಗಳಿಂದ ನಷ್ಠದ ಬಾಬ್ತು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ, ಈ ಕಾರ್ಯಕ್ಕೆ ತಮ್ಮ
ಸೂಚನೆಯಂತೆ ಇನ್ನು ಮುಂದೆ ಮತ್ತಷ್ಟು ವೇಗ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ತಿಳಿಸಿದರು. ನೆರೆಯಿಂದ ಮನೆ ಹಾನಿಯಾದವರಿಗೆ ಪರಿಹಾರ ವಿತರಣೆ ಸಂದರ್ಭದಲ್ಲಿ ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದಂತೆ , ಸಮರ್ಪಕವಾಗಿ ಪರಿಹಾರ ವಿತರಿಸಿ , ವಿಕೋಪ ಸಂದರ್ಭದಲ್ಲಿ ಹಾನಿಯಾದ ಜಿಲ್ಲೆಯ ಕಿಂಡಿ ಅಣೆಕಟ್ಟುಗಳ ವಿವರ, ಅವುಗಳ ಛಾಯಾಚಿತ್ರಗಳು, ಅಂದಾಜು ವೆಚ್ಚ ಮತ್ತು ದುರಸ್ತಿಗೆ ಬಿಡುಗಡೆಯಾದ ಅನುದಾನ ಮತ್ತು ಕೈಗೊಂಡ
ದುರಸ್ತಿಕಾರ್ಯಗಳ ಕುರಿತು ಸಂಪೂರ್ಣ ವಿವರಗಳನ್ನು ಲೋಕಾಯುಕ್ತ ಕಚೇರಿಗೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಉಪಲೋಕಯುಕ್ತರು, ನೆರೆಯಿಂದ ಮನೆ ಹಾನಿಯಾದವರಿಗೆ ಶೀಘ್ರದಲ್ಲಿ ಸಂಪೂರ್ಣ ಪರಿಹಾರ ವಿತರಿಸುವ ಕುರಿತಂತೆ ತಾವು ಜಿಲ್ಲೆಗೆ ಭೇಟಿ ಪರಿಶೀಲನೆ ಸಭೆ ನಡೆಸಿದ ದಿನವನ್ನು ಉಲ್ಲೇಖಿಸಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸೆಪ್ಟಂಬರ್ ತಿಂಗಳಿನಲ್ಲಿ ಸುರಿದ ಭಾರೀ ಮಳೆಯಿಂದ 898 ಮನೆಗಳಿಗೆ ಹಾನಿಯಾಗಿದ್ದು, 3666 ಸಂತ್ರಸ್ಥರಿಗೆ ಅಗತ್ಯ ಸಾಮಗ್ರಿ ಖರೀದಿಗೆ ತಲಾ 10000 ರೂ ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, 393.89 ಲಕ್ಷ ರೂ ಗಳ ಮನೆ ನಷ್ಠದ ವರದಿಯನ್ನು ಸಲ್ಲಿಸಲಾಗಿದ್ದು, ಈಗಾಗಲೇ 104 ಪ್ರಕರಣಗಳಲ್ಲಿ 62.23 ಲಕ್ಷ ರೂ ನೇರವಾಗಿ ಅನುದಾನ ಫಲಾನುಭವಿಗೆ ಖಾತೆಗೆ ಜಮೆ ಆಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು. ಜಿಲ್ಲೆಯು ಕಂದಾಯ ಸೇವೆಗಳನ್ನು ನೀಡುವಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿರುವುದನ್ನು, ಕೋವಿಡ್19 ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳು, ಪಾವತಿ ಖಾತೆ ಅದಾಲತ್ ನಡೆಸಿರುವ ಬಗ್ಗೆ ಮತ್ತು ಮನೆ ಬಾಗಿಲಿಗೆ ತೆರಳಿ 4000 ಮಂದಿಗೆ ಪಿಂಚಣಿ ಸೌಲಭ್ಯ ಒದಗಿಸಿರುವುದನ್ನು ತಿಳಿದ ನ್ಯಾ. ಬಿ.ಎಸ್.ಪಾಟೀಲ್ ಈ ಕಾರ್ಯಗಳು ಇಡೀ ರಾಜ್ಯಕ್ಕೆ ಮಾದರಿಯಾಗಿವೆ ಎಂದು ಶ್ಲಾಘಿಸಿದರು.

ಉಡುಪಿ ಜಿಲ್ಲೆಯಲ್ಲಿ ಯುವ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರ್ಕಾರ ತಮಗೆ ನೀಡಿರುವ ಅಧಿಕಾರದಿಂದ, ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಿ, ದಕ್ಷತೆಯಿಂದ ಕಾರ್ಯನಿರ್ವಹಿಸಿ, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು. ಎಲ್ಲಾ ಕಚೇರಿಗಳಲ್ಲಿ ಕಡತಗಳನ್ನು ಸೂಕ್ತ ರೀತಿಯಲ್ಲಿ ಸಿದ್ದಪಡಿಸಿಕೊಂಡಿರಬೇಕು, ಇದರಿಂದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದ ಸಂದರ್ಭದಲ್ಲಿ, ಕಾಲಮಿತಿಯಲ್ಲಿ ವರದಿ ಪಡೆದು , ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಾಗಲಿದೆ ಎಂದು ಉಪ ಲೋಕಾಯುಕ್ತರು ತಿಳಿಸಿದರು. ಸಭೆಯಲ್ಲಿ ಎಸ್ಪಿ ವಿಷ್ಣುವರ್ಧನ್, ಮಂಗಳೂರಿನ ಲೋಕಾಯುಕ್ತ ಎಸ್ಪಿ ಕುಮಾರಸ್ವಾಮಿ, ಡಿ.ಎಫ್.ಓ ಆಶೀಶ್ ರೆಡ್ಡಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ವಂದಿಸಿದರು, ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!