ತ್ರಾಸಿ: ಕಾರು ಹಾಗೂ ರಿಕ್ಷಾ ನಡುವೆ ರಸ್ತೆ ಅಪಘಾತ – ಮೂವರಿಗೆ ಗಂಭೀರ
ಕುಂದಾಪುರ: ಕಾರು ಹಾಗೂ ರಿಕ್ಷಾ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ತ್ರಾಸಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಹಾಗೂ ತ್ರಾಸಿಯಿಂದ ಮೊವಾಡಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ರಿಕ್ಷಾ ಚಾಲಕ ಮತ್ತು ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದು, ತಕ್ಷಣ ಅವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿ ಸಂಭವಿಸುವ ಅಪಘಾತಗಳಿಗೆ ಅವೈಜ್ಞಾನಿಕವಾಗಿ ನಿರ್ಮಿಸಲಾದ ಕ್ರಾಸಿಂಗ್ ಕಾರಣ ಆದುದರಿಂದ ಕಾಮಗಾರಿ ಗುತ್ತಿಗೆ ವಹಿಸಿರುವ ಕಂಪೆನಿಯವರು ಕೂಡಲೇ ಸ್ಥಳಕ್ಕೆ ಆಗಮಿಸಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದು ರಸ್ತೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಸಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ ಹಾಗೂ ಹೈವೆ ಪ್ಯಾಟ್ರೋಲ್ನ ಉಸ್ತುವಾರಿ ಎಎಸ್ಸೈ ಆನಂದ್ ಬೈಂದೂರು ಅವರು ನೀಡಿದ ಭರವಸೆಯ ಹಿನ್ನೆಲೆ ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.