ಕೇಂದ್ರವು ರಾಜ್ಯಕ್ಕೆ ಹಾಗೂ ಕರಾವಳಿಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದೆ: ಶೋಭಾ ಕರಂದ್ಲಾಜೆ
ಉಡುಪಿ: ಅಭಿವೃದ್ಧಿ ಕಾರ್ಯಗಳಲ್ಲಿ ಯುಪಿಎ ಅವಧಿಯ ಕೆಲಸಕ್ಕಿಂತ ಎರಡು ಪಟ್ಟು ಹೆಚ್ಚಿನ ಕೆಲಸ ಪ್ರಧಾನಿ ನರೇಂದ್ರ ಮೋದಿಯವರ ಸರಕಾರದಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ರಾಜ್ಯಕ್ಕೆ ಹಾಗೂ ಕರಾವಳಿಗೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದೆ. ಈಗಾಗಲೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದಲ್ಲಿ 33 ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಲೋಕಾರ್ಪಣೆ ಮಾಡಲಾಗುತ್ತಿದೆ. ಕುಂದಾಪುರದಿಂದ ಹೊನ್ನಾವರ ತನಕ 2639 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ.
ಕಳೆದ ಮಳೆಯ ಅಬ್ಬರಕ್ಕೆ ಸಂಪೂರ್ಣ ದುರಸ್ಥಿಗೊಂಡಿದ್ದ ಚಾರ್ಮಾಡಿ ಘಾಟಿ ರಸ್ತೆಯ 13 ಕಿಲೋ ಮೀಟರ್ ತಡೆ ಗೋಡೆಗೆ 19.5 ಕೊಟಿ ರೂ ಕೋಟಿ ವೆಚ್ಚದಲ್ಲಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಇದರೊಂದಿಗೆ ಕಡಿಕೆರೆಯಿಂದ ಎಸ್.ಕೆ ಬಾರ್ಡರ್ ವರೆಗೆ 96 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗಿದೆ. ಪುತ್ತಿಗೆ ಬ್ರಿಡ್ಜ್, ಮೆಮ್ಮಾರೋ ಬ್ರಿಡ್ಜ್, ಎಸ್.ಕೆ ಬಾರ್ಡರ್ ತನಕದ ಮೂರು ಸೇತುವೆಗಳಿಗೆ 9 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಕರಾವಳಿಯ ರಸ್ತೆಗಳನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದರು.