ಕೊರೋನಾ ವೈರಸ್ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಇದಕ್ಕೆ ಸರ್ಕಾರವೇ ಕಾರಣ: ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ

ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಇದಕ್ಕೆ ಸರ್ಕಾರವೇ ಕಾರಣವಾಗಿದ್ದು. ಸೂಕ್ತ ರೀತಿಯಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅಶೋಕ್ ಭೂಷಣ್, ಆರ್ ಎಸ್ ರೆಡ್ಡಿ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ನ್ಯಾಯಪೀಠವು, ‘ಕೋವಿಡ್-19 ವಿರುದ್ಧ ವಿಶ್ವ ಸಮರ ನಡೆಯುತ್ತಿದೆ. ಕೊರೋನಾ ಸಾಂಕ್ರಾಮಿಕದಿಂದಾಗಿ ವಿಶ್ವದ ಪ್ರತಿಯೊಬ್ಬರೂ  ಒಂದಲ್ಲ ಒಂದು ರೀತಿಯಲ್ಲಿ ಬಳಲುತ್ತಿದ್ದಾರೆ. ಕರ್ಫ್ಯೂ ಅಥವಾ ಲಾಕ್ ಡೌನ್ ವಿಧಿಸುವ ಯಾವುದೇ ನಿರ್ಧಾರವನ್ನು ಬಹಳ ಹಿಂದೆಯೇ ಘೋಷಿಸಬೇಕು, ಇದರಿಂದ ಜನರು ಲಾಕ್ ಡೌನ್ ಸಿದ್ದರಾಗಲು ನೆರವಾಗುತ್ತದೆ. ಅಗತ್ಯ ವಸ್ತುಗಳ ಶೇಖರಣೆಗೆ ಸಾಧ್ಯವಾಗುತ್ತದೆ. ಅವರ ಜೀವನೋಪಾಯಕ್ಕೆ ಅವಕಾಶ ಕಲ್ಪಿಸಬಹುದು ಎಂದು ಪೀಠ  ಅಭಿಪ್ರಾಯಪಟ್ಟಿದೆ.

ಇದೇ ವೇಳೆ ವೈದ್ಯರು ಮತ್ತು ದಾದಿಯರು ಸೇರಿದಂತೆ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಈಗಾಗಲೇ ಎಂಟು ತಿಂಗಳ ಕಾಲ ದಣಿವರಿಯದ ಕೆಲಸದಿಂದಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿದ್ದಾರೆ. ಅವರಿಗೆ ಮಧ್ಯಂತರ ವಿಶ್ರಾಂತಿ ನೀಡಲು ಕೆಲವು ಕಾರ್ಯವಿಧಾನಗಳು  ಬೇಕಾಗಬಹುದು. ಈ ಕುರಿತಂತೆ ಸರ್ಕಾರ ಸೂಕ್ತ ಮಾರ್ಗೋಪಾಯ ಸಿದ್ಧಪಡಿಸಬೇಕು ಎಂದು ಹೇಳಿದೆ.

ಅಂತೆಯೇ ಈ ಸಾಂಕ್ರಾಮಿಕ ಸಮಯದಲ್ಲಿ ಪ್ರತಿ ರಾಜ್ಯವು ಜಾಗರೂಕತೆಯಿಂದ ವರ್ತಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು. ಇದು ಸಂದರ್ಭಕ್ಕೆ ತಕ್ಕಂತೆ ಸ್ಪಂದಿಸುವ ಸಮಯ. ನಾಗರಿಕರ  ಸುರಕ್ಷತೆ ಮತ್ತು ಆರೋಗ್ಯವು ಇತರ ಯಾವುದೇ ಪರಿಗಣನೆಗಳಿಗಿಂತ ಮೊದಲ ಆದ್ಯತೆಯಾಗಿರಬೇಕು. ದೇಶಾದ್ಯಂತ ಕೋವಿಡ್ ಮಾರ್ಗಸೂಚಿಗಳು ಮತ್ತು ಎಸ್‌ಒಪಿಗಳ ಅನುಷ್ಠಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಉನ್ನತ ನ್ಯಾಯಾಲಯವು ಹೆಚ್ಚಿನ  ನಿರ್ದೇಶನಗಳನ್ನು ನೀಡಿತು.

Leave a Reply

Your email address will not be published. Required fields are marked *

error: Content is protected !!