ಕೋಟ ಹೆಜ್ಜೇನು ದಾಳಿ: 6 ಮಂದಿ ಮಹಿಳೆಯರು ಅಸ್ವಸ್ಥ
ಕೋಟ: ಹೆಜ್ಜೇನು ದಾಳಿಗೆ ಕೃಷಿ ಕಾರ್ಯದಲ್ಲಿ ತೊಡಗಿದ್ದ 6 ಮಂದಿ ಮಹಿಳೆಯರು ಅಸ್ವಸ್ಥರಾಗಿರುವ ಘಟನೆ ಕೋಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಸನಗುಂದು ಪರಿಸರದಲ್ಲಿ ನಡೆದಿದೆ.
ಪ್ರೇಮ, ಬುಡ್ಡು, ಕಾವೇರಿ, ಪದ್ದು, ಸುಶೀಲ, ಲಚ್ಚಿ ಹೆಜ್ಜೆನು ದಾಳಿಗೆ ತುತ್ತಾದ ಮಹಿಳೆಯರು. ಇವರು, ನಿನ್ನೆ ಸಂಜೆ ಕೃಷಿ ಕಾರ್ಯದ ನಿಮಿತ್ತ ಗದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಹೆಜ್ಜೇನುಗಳು ಏಕಾಏಕಿ ದಾಳಿ ಮಾಡಿದೆ. ಜೇನು ದಾಳಿಮಾಡುತ್ತಿದ್ದಂತೆ ಕೂಗಿಕೊಂಡು ಮಹಿಳೆಯರು ಅಲ್ಲಿರುವ ಮನೆಯ ಒಳಗೆ ಹೊಗಲು ಯತ್ನಿಸಿದರು.
ಈ ವೇಳೆ, ಸಿಂಚನಾ ಎಂಬವರು ತನ್ನ ಜೀವವನ್ನು ಲೆಕ್ಕಿಸದೆ ದಾಳಿಯಿಂದ ಮಹಿಳೆಯರನ್ನು ತಪ್ಪಿಸಲು ಯತ್ನಿಸಿದ್ದು ಅಲ್ಲದೆ ಆ್ಯಂಬುಲೇನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಕರಿಸಿದ್ದಾರೆ.
ಹೆಜ್ಜೆನು ದಾಳಿಗೆ ತುತ್ತಾದ ಮಹಿಳೆಯರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಪ್ರೇಮ ಹಾಗೂ ಬುಡ್ಡು ಎಂಬವರಿಗೆ ಹೆಜ್ಜೇನು ಅತಿಯಾಗಿ ಕಚ್ಚಿದ ಪರಿಣಾಮ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ನು ಕಾವೇರಿ, ಪದ್ದು, ಸುಶೀಲ ಎಂಬವರು ಕೋಟೇಶ್ಚರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲಚ್ಚಿ ಎಂಬವರು ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.