ಉಜಿರೆ; ಅಪಹರಣಕ್ಕೊಳಗಾದ ಮಗು ಕೋಲಾರದಲ್ಲಿ ರಕ್ಷಣೆ – 7 ಮಂದಿ ಬಂಧನ
ಬೆಳ್ತಂಗಡಿ(ಉಡುಪಿ ಟೈಮ್ಸ್ ವರದಿ): ಉಜಿರೆಯ 8 ವರ್ಷದ ಬಾಲಕ ಅನುಭವ್ನ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣವನ್ನು ಭೇದಿಸಲು ನಾಲ್ಕು ತಂಡಗಳನ್ನು ರಚಿಸಿ, ಕಾರ್ಯಾಚರಣೆ ನಡೆಸಿದ ಪೊಲೀಸರು, ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು(ಡಿ.19) ನಸುಕಿನ ಜಾವ 5 ಗಂಟೆ ಸುಮಾರಿಗೆ ಮಗುವನ್ನು ಪತ್ತೆ ಹಚ್ಚಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಬಂಧಿಸಲ್ಪಟ್ಟ 7 ಮಂದಿಯನ್ನು ಕೋಲಾರ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಇಂದು ಅಪರಾಹ್ನ 11 ಗಂಟೆಗೆ ಕೋಲಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ ಎನ್ನಲಾಗಿದೆ.ಡಿ.17 ರಂದು ಉಜಿರೆಯ ರಥಬೀದಿಯ ಅಶ್ವತ್ಥ ಕಟ್ಟೆ ಸಮೀಪದ ಮನೆ ಮುಂದೆ ಆಟವಾಡುತ್ತಿದ್ದ ಅನುಭವ್ (8) ನನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಅಲ್ಲದೇ ಮನೆಯವರಲ್ಲಿ 17 ಕೋ.ರೂ. ಗೆ ಬೇಡಿಕೆಯಿಟ್ಟಿದ್ದು, ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು.