ಪ್ರಧಾನಿ ಮೋದಿ ವಾರಣಾಸಿ ಕಚೇರಿಯನ್ನು ಒಎಲ್ಎಕ್ಸ್ನಲ್ಲಿ ‘ಮಾರಾಟ’ಕ್ಕಿಟ್ಟ ನಾಲ್ವರ ಬಂಧನ
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಚೇರಿಯನ್ನು “ಮಾರಾಟ” ಮಾಡುತ್ತಿರುವುದಾಗಿ ಹೇಳಿ ಆನ್ಲೈನ್ ಜಾಹೀರಾತನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಲೋಕಸಭಾ ಕ್ಷೇತ್ರ ವಾರಣಾಸಿಯನ್ನು ಪ್ರತಿನಿಧಿಸುವ ಮೋದಿಯವರ “ಜನಸಂಪರ್ಕಕಾರ್ಯಲಯ (ಸಾರ್ವಜನಿಕ ಸಂಪರ್ಕ ಕಚೇರಿ)” ಯ ಚಿತ್ರವನ್ನು ಒಎಲ್ಎಕ್ಸ್ ವೆಬ್ಸೈಟ್ನಲ್ಲಿ ಹಾಕಿ ಇದನ್ನು “ಮಾರಾಟಕ್ಕೆ ಇಡಲಾಗಿದೆ” ಎಂದು ಆರೋಪಿಗಳು ಜನರನ್ನು ವಂಚಿಸಿದ್ದಾರೆ. ಈ ಕಚೇರಿ ನಗರದ ಜವಾಹರ್ ನಗರ ಪ್ರದೇಶದಲ್ಲಿದೆ ಮತ್ತು ಇದು ಭೆಲಾಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ವಾರಣಾಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಅಮಿತ್ ಪಾಠಕ್ ತಿಳಿಸಿದ್ದಾರೆ.
“ಪ್ರಧಾನ ಮಂತ್ರಿಯ ಕಚೇರಿಯನ್ನು ಒಎಲ್ಎಕ್ಸ್ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂಬುದು ನಿನ್ನೆ ನಮ್ಮ ಗಮನಕ್ಕೆ ಬಂದಿದೆ. ಭೆಲಾಪುರ ಪೊಲೀಸ್ ಠಾಣೆಯಲ್ಲಿ ತಕ್ಷಣ ಎಫ್ಐಆರ್ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗಿತ್ತು. ಸಧ್ಯ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರ ಪೈಕಿ ಒಬ್ಬ ಮೋದಿಯವರ ಕಚೇರಿಯ ಚಿತ್ರವನ್ನು ತೆಗೆದುಕೊಂಡು ವೆಬ್ಸೈಟ್ನಲ್ಲಿ ಇರಿಸಿದ ವ್ಯಕ್ತಿಯಾಗಿದ್ದಾನೆ” ಪಾಠಕ್ ತಿಳಿಸಿದ್ದಾರೆ.
ಆರೋಪಿಗಳನ್ನು ಪ್ರಶ್ನಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿ 2014 ರಲ್ಲಿ ಮೊದಲ ಬಾರಿಗೆ ವಾರಣಾಸಿಯಿಂದ ಲೋಕಸಭೆಗೆ ಆಯ್ಕೆಯಾದರು ನಂತರ 2019 ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಆಯ್ಕೆಯಾದರು.