ನಾಲ್ಕು ಕಂಪನಿಗಳಿಂದ ಕರ್ನಾಟಕ ಬ್ಯಾಂಕ್ ಗೆ 285 ಕೋಟಿ ರೂ. ವಂಚನೆ
ನವದೆಹಲಿ: ಡಿಎಚ್‌ಎಫ್‌ಎಲ್ ಸೇರಿದಂತೆ ನಾಲ್ಕು ಕಂಪನಿಗಳು ತಮಗೆ ಸಾಲ ನೀಡಿದ ಖಾಸಗಿ ವಲಯದ ಕರ್ನಾಟಕ ಬ್ಯಾಂಕ್ ಗೆ ಬರೋಬ್ಬರಿ 285 ಕೋಟಿ ರೂ.ಗಳ ವಂಚಿಸಿರುವುದಾಗಿ ವರದಿ ಮಾಡಿದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್ (ಡಿಎಚ್‌ಎಫ್‌ಎಲ್), ರಿಲಿಗೇರ್ ಫಿನ್‌ವೆಸ್ಟ್, ಫೆಡರ್ಸ್ ಎಲೆಕ್ಟ್ರಿಕ್ ಮತ್ತು ಎಂಜಿನಿಯರಿಂಗ್ ಲಿಮಿಟೆಡ್ ಮತ್ತು ಲೀಲ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನಿಂದ 2009 ರಿಂದ 2014 ರ ಅವಧಿಯಲ್ಲಿ ಒಟ್ಟು 285.52 ಕೋಟಿ ರೂ. ವಂಚಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ತಿಳಿಸಿದೆ.
ಈ ಪೈಕಿ ಡಿಎಚ್‌ಎಫ್‌ಎಲ್ ಅತಿ ಹೆಚ್ಚು ಅಂದರೆ 180.13 ಕೋಟಿ ರೂ., ನಂತರ ರಿಲಿಗೇರ್ ಫಿನ್‌ವೆಸ್ಟ್ 43.44 ಕೋಟಿ ರೂ., ಫೆಡರ್ಸ್ ಎಲೆಕ್ಟ್ರಿಕ್ 41.30 ಕೋಟಿ ಮತ್ತು ಲೀಲ್ ಎಲೆಕ್ಟ್ರಿಕಲ್ಸ್ 20.65 ಕೋಟಿ ರೂ. ವಂಚಿಸಿದೆ ಎಂದು ಬ್ಯಾಂಕ್ ತಿಳಿಸಿದೆ.
2014 ರಿಂದ ನಮ್ಮೊಂದಿಗೆ ವ್ಯವಹರಿಸುವ ಡಿಎಚ್‌ಎಫ್‌ಎಲ್(ಡೀಫಾಲ್ಟ್ ಘಟಕ) ಒಕ್ಕೂಟದ ವ್ಯವಸ್ಥೆಯಲ್ಲಿ ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದೆ, ಅದರ ಸದಸ್ಯ ಬ್ಯಾಂಕುಗಳಲ್ಲಿ ನಾವು ಒಬ್ಬರಾಗಿದ್ದೇವೆ. ಖಾತೆಯ ನಡವಳಿಕೆ ಮತ್ತು ಇತರ ಬೆಳವಣಿಗೆಗಳಲ್ಲಿ ಆರಂಭಿಕ ಎಚ್ಚರಿಕೆ ಸಂಕೇತಗಳ(ಇಡಬ್ಲ್ಯೂಎಸ್) ಗಮನಿಸಿ, ಅದರ ಖಾತೆಯನ್ನು ನವೆಂಬರ್ 11, 2019 ರಂದು ಕೆಂಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದೆ.
ಈ ಕಂಪನಿಗಳ ಸಾಲ ಖಾತೆಗಳನ್ನು ಅಕ್ಟೋಬರ್ 30, 2019 ರಂದು ಅನುತ್ಪಾದಕ ಆಸ್ತಿ(ಎನ್ ಪಿಎ) ಎಂದು ವರ್ಗೀಕರಿಸಲಾಗಿದೆ. ಕಂಪನಿಗೆ ಈ ಹಿಂದೆ ವಿಸ್ತರಿಸಿದ ಸಾಲ ಸೌಲಭ್ಯಗಳಲ್ಲಿ ದುರುಪಯೋಗ ಮತ್ತು ಹಣವನ್ನು ಬೇರೆಡೆಗೆ ತಿರುಗಿಸಿದ್ದಕ್ಕಾಗಿ 180.13 ಕೋಟಿ ರೂ.ಗಳ ವಂಚನೆಯಾಗಿದೆ ಎಂದು ಕರ್ನಾಟಕ ಬ್ಯಾಂಕ್ ಆರ್‌ಬಿಐಗೆ ತಿಳಿಸಿದೆ.