ಚಂಡಮಾರುತ ತೀವ್ರತೆಯ ಸ್ವರೂಪ ಪಡೆಯಲಿದೆ :ಇಲಾಖೆ ಎಚ್ಚರಿಕೆ
ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಅಂಫಾನ್’ ಚಂಡಮಾರುತವು ಮುಂದಿನ ಆರು ಗಂಟೆಗಳಲ್ಲಿ ಅತಿ ತೀವ್ರತೆಯ ಸ್ವರೂಪದಿಂದ ಅತಿಹೆಚ್ಚು ತೀವ್ರತೆಯ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ‘ಒಡಿಶಾದ ಪರದೀಪ್‌ನಿಂದ ದಕ್ಷಿಣಕ್ಕೆ 870 ಕಿ.ಮೀ. ದೂರದಲ್ಲಿ ಕಾಣಿಸಿಕೊಂಡಿದ್ದ ತೀವ್ರ ಸ್ವರೂಪದ ಚಂಡಮಾರುತವು ಮುಂದಿನ ಆರು ತಾಸುಗಳಲ್ಲಿ ಅತಿ ತೀವ್ರತೆಯ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಸಿದೆ. ಮೇ 20ರ ಮಧ್ಯಾಹ್ನ ಅಥವಾ ಸಂಜೆಗೆ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಸಮುದ್ರ ತೀರದಿಂದ ಭೂಪ್ರದೇಶವನ್ನು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಒಡಿಶಾ ಸರ್ಕಾರದ ವಿಶೇಷ ಪರಿಹಾರ ಕಾರ್ಯಾಚರಣೆ ಪಡೆಯು ಕ್ಯಾಂಝಾರ್ ಮತ್ತು ಮಯೂರ್‌ಭಂಜ್ ಜಿಲ್ಲೆಗಳಲ್ಲಿ ಅಪಾಯಕಾರಿ ಚಂಡಮಾರುತದ ಎಚ್ಚರಿಕೆ ಘೋಷಿಸಿದೆ. ಅಂಫಾನ್ ಚಂಡಮಾರುತ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ನಿರ್ವಹಿಸಲೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾರ್ಯಪಡೆಯು (ಎನ್‌ಡಿಆರ್‌ಎಫ್) ಒಡಿಶಾಗೆ 10 ಮತ್ತು ಪಶ್ಚಿಮ ಬಂಗಾಳಕ್ಕೆ 7 ತಂಡಗಳನ್ನು ರವಾನಿಸಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಎನ್‌ಡಿಆರ್‌ಎಫ್ ಸಮನ್ವಯ ಸಾಧಿಸಿದ್ದು, ರಕ್ಷಣಾ ಚಟುವಟಿಕೆಗಳನ್ನು ಯೋಜಿಸುತ್ತಿದೆ. |