ಕಾಪು: ಎಂಟು ವರ್ಷಗಳ ನಂತರ ಖತರ್ನಾಕ್ ಕಳ್ಳರ ಬಂಧನ – 2ಲಕ್ಷ ಮೌಲ್ಯದ ಸೊತ್ತು ವಶ
ಕಾಪು: ಕಾಪುವಿನಲ್ಲಿ ಎಂಟು ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಸತ್ತಾರ್ (38), ಅಬ್ದುಲ್ ರೆಹಮಾನ್ ಪಕ್ರುದ್ದೀನ್ ಯಾನೆ ರಹೀಂ(49) ಬಂಧಿತ ಆರೋಪಿಗಳು. ಬಂಧಿತರಿಂದ ಚಿನ್ನದ ನೆಕ್ಲೆಸ್ ಹಾಗೂ ಚಿನ್ನದ ಬಳೆಗಳು ಸೇರಿ ಒಟ್ಟು 1,92,000 ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು 2012 ರ ಜುಲೈ 24 ರಂದು ಮಲ್ಲಾರು ಗ್ರಾಮದ ಕೋಟೆ ಎಂಬಲ್ಲಿರುವ ಪರ್ವಿನ್ ಬಾಬು ಎಂಬವರ ಮನೆಗೆ, ಯಾರೂ ಇಲ್ಲದ ವೇಳೆ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು, ಮನೆಯ ಒಳಗೆ ಬೆಡ್ರೂಮಿನಲ್ಲಿದ್ದ ಗೋದ್ರೆಜ್ನ್ನು ಕೀ ಬಳಸಿ ತೆಗೆದು, ಅದರ ಒಳಗೆ ಇಟ್ಟಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇನ್ನೊಂದು ಬೆಡ್ರೂಮ್ನಲ್ಲಿದ್ದ ರೂ. 50,000 ಮೌಲ್ಯದ ಸ್ಟವ್ಬಾಕ್ಸ್, ಪಾತ್ರೆ ಪರಿಕರಗಳು, ನಳ್ಳಿ ನೀರಿನ ಬೀಗ, ಡೋರ್ಲಾಕ್ ಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪ್ರಕರಣ ನಡೆದು ೮ ವರ್ಷಗಳ ಬಳಿಕ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು. ಪ್ರಕರಣದ ಓರ್ವ ಆರೋಪಿಯಾದ ಅಬ್ದುಲ್ ಸತ್ತಾರ್ನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ತಾನು ಅಬ್ದುಲ್ ರೆಹಮಾನ್ ಪಕ್ರುದ್ದೀನ್ ಯಾನೆ ರಹೀಂ ಜೊತೆ ಇನ್ನಿಬ್ಬರು ಆರೋಪಿಗಳೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ಹೇಳಿದ್ದನು. ಇದೀಗ ಆರೋಪಿ ನೀಡಿದ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮತ್ತೋರ್ವ ಆರೋಪಿಯನ್ನೂ ಬಂಧಿಸಿ ಕಳವು ಮಾಡಿದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕರಿ, ವಿಷ್ಣುವರ್ಧನ್ ಎನ್, ಹೆಚ್ಚವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಭರತ್ ಎಸ್ ರೆಡ್ಡಿ ಇವರ ನಿರ್ದೇಶನದಲ್ಲಿ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ಠಾಣಾ ಅಪರಾಧ ವಿಭಾಗದ ಪಿ.ಎಸ್.ಐ.ಯುನೂಸ್ ಗಡ್ಡೇಕರ್ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಅಚ್ಚುತ, ನಾಗರಾಜು ಹಾಗೂ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಪ್ರವೀಣ ಕುಮಾರ್, ನಾರಾಯಣ, ರಾಜೇಶ್, ಸಂದೇಶ್, ಆನಂದ ರವರು ಪಾಲ್ಗೊಂಡಿದ್ದರು. |