ಪಂಜಾಬ್ ಸರಕಾರ ಎಪಿಎಂಸಿ ಲಾಬಿಗೆ ಒಳಗಾಗಿದೆ: ಸಂಸದೆ ಶೋಭಾ ಕರಂದ್ಲಾಜೆ
ಉಡುಪಿ: ಕೃಷಿ ಮಸೂದೆಯನ್ನು ರೈತರು ಅರ್ಥಮಾಡಿಕೊಳ್ಳಬೇಕು. ಈ ಕಾಯ್ದೆಯ ತಿದ್ದುಪಡಿಯಲ್ಲಿರುವ ಅಂಶಗಳನ್ನು ಅರಿತುಕೊಳ್ಳಬೇಕು ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇಂದು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮಾತನಾಡಿರುವ ಅವರು, ರೈತರು ಕೃಷಿ ಮಸೂದೆ ಕುರಿತಂತೆ ಯಾವುದೇ ತಪ್ಪು ಮಾಹಿತಿಗಳಿಗೆ ಕಿವಿಗೊಡಬಾರದು, ಈ ಕಾಯ್ದೆಯ ತಿದ್ದು ಪಡಿಯ ಅನ್ವಯ , ಎಪಿಎಂಸಿಯೂ ಇರಲಿದೆ. ಈ ಮೂಲಕ ಯಾವುದೇ ರೈತ ತಾನು ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಬೇಕೆಂದು ಕೊಂಡರೆ, ಆ ರೈತರಿಗೆ ಎಪಿಎಂಸಿಯಲ್ಲಿ ಮುಕ್ತವಾಗಿ ವ್ಯವಹಾರ ನಡೆಸಲು ಅವಕಾಶವಿದೆ. ಇದರೊಂದಿಗೆ, ಎಪಿಎಂಸಿ ಗಿಂತ ಹೊರಗಿನ ಮಾರುಕಟ್ಟೆ, ಖಾಸಗಿ ಮಾರುಕಟ್ಟೆ, ಅಥವಾ ಇತರ ಅಂಗಡಿ ದಾಸ್ತನುದಾರರ ಬಳಿ ಹೆಚ್ಚು ಆದಾಯ ಸಿಗುತ್ತದೆಂದಾರೆ ಅಲ್ಲಿಯೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಈ ಪ್ರಕಾರ ಕೃಷಿ ಮಸೂದೆಯಲ್ಲಿ ತಿದ್ದುಪಡಿ ತರಲಾಗಿದೆ. ಆದ್ದರಿಂದ ಎಪಿಎಂಸಿ ಯಲ್ಲಿ ರೈತರ ಬೆಳೆ ಮಾರಾಟ ಮಾಡಲು ಯಾರನ್ನು ತಡೆಯುತ್ತಿಲ್ಲ ಆದರೆ ಈ ಮಸೂದೆಯಿಂದ ರೈತರಿಗೆ ಹೆಚ್ಚಿನ ಲಾಭವಾಗುತ್ತದೆ ಇದನ್ನು ರೈತರು ಅರ್ಥಮಾಡಿಕೊಳ್ಳಬೇಕು ಎಂದರು.ಇನ್ನು ಪಂಜಾಬ್‌ನ ರೈತರ ಹೋರಾಟ ಕುರಿತು ಪ್ರತಿಕ್ರಿಯ ನೀಡಿರುವ ಅವರು, ಒಂದೊಂದು ರಾಜ್ಯದಲ್ಲಿ ಒಂದೊಮನದು ಕಾಲಘಟ್ಟದಲ್ಲಿ ಒಂದೊಂದು ಲಾಬಿ ನಡೆಯುತ್ತೆ. ಅದೇ ರೀತಿ ಪಂಜಾಬ್‌ನಲ್ಲಿ ಈಗ ಎಪಿಎಂಸಿ ಲಾಬಿ ನಡೆಯುತ್ತಿದೆ. ಪಂಜಾಬ್ ಸರಕಾರಕ್ಕೆ ಎಪಿಎಂಸಿಯಿಂದ ಹೆಚ್ಚಿನ ಲಾಭ ಸಿಗುತ್ತಿದೆ ಆದ್ದರಿಂದ ಅಲ್ಲಿ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಅಲ್ಲಿನ ಸರಕಾರ ಎಪಿಎಂಸಿ ಲಾಬಿಗೆ ಒಳಗಾಗಿದೆ ಅದು ರೈತರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟ ಅಲ್ಲ ಬದಲಾಗಿ, ಮಧ್ಯವರ್ತಿಗಳ ಹಿತಕ್ಕಾಗಿ ನಡೆಯುತ್ತಿರುವ ಹೋರಾಟ ಎಂದಿದ್ದಾರೆ. ಇದೇ ವೇಳೆ ರಾಜ್ಯದಲ್ಲಿನ ರೈತರ ಹೋರಾಟ ಕುರಿತಂತೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಕೋಡಿಹಳ್ಳಿ ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ನಡೆದ ರೈತರ ಹೋರಾಟ ಕೇವಲ ರೈತ ಪರ ಹೋರಾಟವಾಗಿ ಮಾತ್ರ ಉಳಿಯಲಿಲ್ಲ. ಈ ಹೋರಾಟಕ್ಕೆ ಕಾಂಗ್ರೆಸ್‌ನ ಮುಖಂಡರು ಭೇಟಿ ನೀಡಿ ಕಾಂಗ್ರೆಸ್‌ನ ಬೆಂಬಲ ಸಿಗುತ್ತಿದ್ದಂತೆ, ಚಂದ್ರಶೇಖರ್ ಅವರು, ಕಾಂಗ್ರೆಸ್ ನ ಪರವಾಗಿ ಅವರ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆನೋ ಎಂಬ ಅನುಮಾನ ಮೂಡುತ್ತಿದೆ ಎಂದರು. |