ಮಲ್ಪೆ: ಮೀನುಗಾರಿಕಾ ಬೋಟ್ನ ಮಾಲಕ ಸಹಿತ ಇಬ್ಬರ ಮೃತದೇಹ ಪತ್ತೆ
ಮಲ್ಪೆ: ಮಲ್ಪೆ ಪರಿಸರದಲ್ಲಿ ಇಬ್ಬರ ಮೃತದೇಹ ಪತ್ತೆಯಾದ ಎರಡು ಪ್ರತ್ಯೇಕ ಘಟನೆ ದಾಖಲಾಗಿರುವ ಕುರಿತು ವರದಿಯಾಗಿದೆ. ಒಂದು ಪ್ರಕರಣದಲ್ಲಿ ಜಯಲಕ್ಷ್ಮೀ ಹೆಸರಿನ ಬೋಟ್ ನ ಪಾಲುದಾರರಲ್ಲಿ ಒಬ್ಬರಾದ ಸುಧೀರ್ ಅವರ ಮೃತದೇಹ ಬಂದರಿನ ಧಕ್ಕೆಯಲ್ಲಿ ಪತ್ತೆಯಾಗಿದೆ. ಡಿ. 13 ರಂದು ಪಾಲುದಾರರು ಸೇರಿ ಒಟ್ಟು 28 ಮಂದಿ ಮೀನುಗಾರರ ತಂಡ ಮೀನುಗಾರಿಕೆಗೆ ತೆರಳಿದ್ದು, ಡಿ 14 ರಂದು ಮೀನುಗಾರಿಕೆ ನಡೆಸಿ ವಾಪಾಸ್ಸಾದ ಇವರು, ಬೋಟ್ನಿಂದ ಮೀನು ಖಾಲಿ ಮಾಡಿ, ಬೋಟ್ನ್ನು ಧಕ್ಕೆಯಲ್ಲಿ ನಿಲ್ಲಿಸಿದ್ದರು. ಬಳಿಕ ಡಿ. 16 ರಂದು ಮಧ್ಯಾಹ್ನದ ವೇಳೆಗೆ ಪವನ್ ಮುಲ್ಕಿ ಎಂಬವರು ಬೋಟ್ನ ಪಾಲುದಾರರಲ್ಲೊಬ್ಬರಾದ ಮಹಮ್ಮದ್ ಅಲಿ ಎಂಬವರಿಗೆ ಕರೆ ಮಾಡಿ, ಸುಧೀರ್ ಅವರ ಮೃತದೇಹ ಧಕ್ಕೆಯ ಹೊಳೆಯಲ್ಲಿ ತೇಳುತ್ತಿರುವುದಾಗಿ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಮಹಮ್ಮದ್ ಅಲಿ ಹಾಗೂ ಇತರ ಪಾಲುದಾರರು ಸೇರಿ ಮಲ್ಪೆ ಧಕ್ಕೆ ಬಂದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸುಧೀರ್ ಅವರು, ಬೋಟ್ನಿಂದ ಧಕ್ಕೆಗೆ ಹೋಗುವ ವೇಳೆ ಅಥವಾ ಬೇರೆ ಯಾವುದೋ ರೀತಿಯಲ್ಲಿ ಧಕ್ಕೆಯ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕೆಮ್ಮಣ್ಣು ಪಡುತೋನ್ಸೆಯ ರಾಮದಾಸ್ ಅವರು, ಸ್ನೇಹಿತನ ಜೊತೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೂಡುಕುದ್ರು ಕಕ್ಕೆತೋಟದ ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ತೇಲುತ್ತಿರುವುದು ಪತ್ತೆಯಾಗಿದೆ. ನಿನ್ನೆ ಸಂಜೆ ವೇಳೆಗೆ ಪಡುಕುದ್ರು ಸುವರ್ಣ ನದಿಯಲ್ಲಿ ರಾಮದಾಸ್ ಅವರು, ದೋಣಿಯಲ್ಲಿ ಮೀನು ಹಿಡಿಯುತ್ತಿರುವಾಗ ಈ ಘಟನೆ ಬೆಳಕಿಗೆ ಬಂದಿದೆ. ಮೃತ ಶರೀರವು ಯಾರದ್ದು ಎಂದು ಪತ್ತೆಯಾಗಿಲ್ಲ, ಇದರ ಜೊತೆಗೆ ಮೃತರು ಯಾವ ರೀತಿ ಮೃತ ಪಟ್ಟಿರಬಹುದು ಎಂಬೂದು ತಿಳಿದು ಬಂದಿಲ್ಲ. ವ್ಯಕ್ತಿಯು ಒಂದು ದಿನದ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. |