ನಾಲ್ವರಿಗೆ ರಾಜ್ಯ ಸಚಿವ ದರ್ಜೆ ನೀಡಿ ಆದೇಶ: 13 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ

ಬೆಂಗಳೂರು: ನಿಗಮ, ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ 13 ಶಾಸಕರಿಗೆ ಸಂಪುಟ ದರ್ಜೆ ಮತ್ತು ನಾಲ್ವರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ ನೀಡಿ ಬುಧವಾರ ಆದೇಶ ಹೊರಡಿಸಲಾಗಿದೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿರುವ ಪ್ರಮುಖ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಈ ಎಲ್ಲರನ್ನೂ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಾಗ ಸ್ಥಾನಮಾನದ ಕುರಿತು ಹೊರಡಿಸಿದ್ದ ಆದೇಶಗಳನ್ನು ಬದಲಿಸಿ, ಬುಧವಾರ ಹೊಸ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ನೆಹರೂ ಓಲೇಕಾರ್‌, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ್‌ (ರಾಜುಗೌಡ), ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಶಿವನಗೌಡ ನಾಯಕ್‌, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಳಕಪ್ಪ ಬಂಡಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷ ಶಂಕರ್ ಪಾಟೀಲ್‌ ಮುನೇನಕೊಪ್ಪ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಅಧ್ಯಕ್ಷ ಮಾಡಾಳ್‌ ವಿರುಪಾಕ್ಷಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ್‌ ನಡಹಳ್ಳಿ, ಕಲ್ಯಾಣ ಕರ್ನಾಟಕ ಪ‍್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ್‌, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ವಿ. ರಾಮಚಂದ್ರ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಎನ್‌. ಭೃಂಗೀಶ್‌ ಅವರಿಗೂ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಬುಧವಾರ ಆದೇಶ ಹೊರಡಿಸಲಾಗಿದೆ.

ರಾಜ್ಯ ಸಚಿವ ಸ್ಥಾನಮಾನ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜ್‌ ಕುಮಾರ್‌ ಪಾಟೀಲ್‌ ತೇಲ್ಕೂರ್‌, ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಸಿ.ಎಸ್‌. ನಿರಂಜನ್‌ ಕುಮಾರ್‌, ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಎಸ್‌. ಜಯರಾಮ್‌ ಮತ್ತು ಡಾ. ಬಾಬು ಜಗಜೀವನ್‌ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್‌. ಲಿಂಗಣ್ಣ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!