ಆರ್.ಎನ್.ಎಸ್. ಶಿಕ್ಷಣ ಸಂಸ್ಥೆ-ಉದ್ಯಮಗಳ ನಿರ್ಮಾತೃ ಆರ್.ಎನ್. ಶೆಟ್ಟಿ ಇನ್ನಿಲ್ಲ

ಬೆಂಗಳೂರು;  ಆರ್.ಎನ್.ಎಸ್. ಶಿಕ್ಷಣ ಮತ್ತು ಉದ್ಯಮ ಸಮೂಹಗಳ ಸ್ಥಾಪಕ ಆರ್.ಎನ್. ಶೆಟ್ಟಿ (92) ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. 

ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಉತ್ತರ ಹಳ್ಳಿಯ ಆರ್.ಎನ್. ಎಸ್. ತಾಂತ್ರಿಕ ವಿದ್ಯಾಲಯ ಕಾಲೇಜು ಆವರಣದಲ್ಲಿ ಮಧ್ಯಾಹ್ನ 2 ಗಂಟೆಯ ನಂತರ ಇಡಲಾಗುವುದು. ಬಳಿಕ ಅಂತ್ಯಸಂಸ್ಕಾರವನ್ನು ಸಂಜೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ ಆರ್.ಎನ್. ಶೆಟ್ಟಿ ಅವರು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ವೈದ್ಯಕೀಯ, ಆತಿಥ್ಯ, ವಸತಿ, ಔದ್ಯಮಿಕ, ಔದ್ಯೋಗಿಕ, ವಾಣಿಜ್ಯ, ಶೈಕ್ಷಣಿಕ, ಮೂಲಸೌಕರ್ಯ, ವಿದ್ಯುತ್ ಹಾಗೂ ನೀರಾವರಿ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿ, ಸಾವಿರಾರು ಜನರಿಗೆ ಅನ್ನದಾತರಾಗಿದ್ದರು.

ಮೂವರು ಗಂಡು, ನಾಲ್ವರು ಹೆಣ್ಣು ಹಾಗೂ ಪತ್ನಿಯನ್ನು ಅಗಲಿದ ಶೆಟ್ಟಿ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಬಾಲ್ಯದಿಂದಲೇ ತಾವು ನಂಬಿದ, ನಿತ್ಯ ಪೂಜಿಸುತ್ತಿದ್ದ ಮುರುಡೇಶ್ವರದ ಪುರಾತನ ಶಿವ ದೇವಾಲಯದ ನವೀಕರಣ ಕೈಂಕರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ ಅವರು, 249 ಅಡಿ ಎತ್ತರದ ಭವ್ಯ ಗೋಪುರ ಮತ್ತು ಬೆಟ್ಟದ ಮೇಲೆ 123 ಅಡಿ ಎತ್ತರದ ಭವ್ಯ ಶಿವನ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಮುರುಡೇಶ್ವರವನ್ನು ಒಂದು ಪವಿತ್ರ ಪುಣ್ಯತಾಣ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿಯೂ ಪರಿವರ್ತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!