ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರ ವೇತನಕ್ಕೆ ಕತ್ತರಿ
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿದ್ದ ಪ್ರತಿಭಟನೆಯೇನು ಮುಗಿಯಿತು ಆದ್ರೆ, ಈ ಪ್ರತಿಭಟನೆಯಲ್ಲಿ ಭಗವಹಿಸಿದ ನೌಕರರ ಸಮಸ್ಯೆ ಮಾತ್ರ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಬಸ್ ಬಂದ್ ಕೊನೆಯಾಯ್ತು ಆದರೆ ಮುಷ್ಕರದಲ್ಲಿ ಪಾಲ್ಗೊಂಡ ಸಾರಿಗೆ ನೌಕರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸಾರಿಗೆ ನೌಕರರ 10 ಬೆಡಿಕೆಗಳ ಪೈಕಿ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಭರವಸೆ ನೀಡಿದ ಬಳಿಕ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜಗಿದ್ದಾರೆ. ಆದರೆ, ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನವಿಲ್ಲ ಎಂಬ ನಿಯಮವಿದೆ. ಹೀಗಾಗಿ ನೌಕರರಿಗೆ ೪ ದಿನಗಳ ಸಂಬಳ ನೀಡುವುದಿಲ್ಲವೆಂದು ಬಿಎಂಟಿಸಿ ಸಂಚಾರ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಹೇಳಿದ್ದಾರೆ. ಈ ಮೂಲಕ ನಾಲ್ಕು ದಿನದ ಪ್ರತಿಭಟನೆಗೆ ಹಾಜರಾದ ನೌಕರರ ವೇತನಕ್ಕೆ ಕತ್ತರಿ ಬಿದ್ದಂತಾಗಿದೆ.
ಪ್ರತಿಭಟನೆ ನಡೆಯುವ ವೇಳೆ ಹೆಚ್ಚು ಜನರು ಸೇರುತ್ತಾರೆ. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ, ಮಾಸ್ಕ್ ಧರಿಸುವುದಿಲ್ಲ, ಹೀಗಾಗಿ ಕೊರೊನಾ ಟೆಸ್ಟ್ ಅಗತ್ಯವಾಗಿದೆ. ಈ ಕುರಿತು ಬಿಎಂಟಿಸಿ, ಕೆಎಸ್ಆರ್ಟಿಸಿ ಜೊತೆ ಮಾತುಕತೆ ನಡೆಸುತ್ತೇವೆ. ಟೆಸ್ಟ್ ಮಾಡಿ ಅಂತ ಲಿಸ್ಟ್ ಕೊಟ್ಟರೆ ನಾವ್ ಕೋವಿಡ್ ಟೆಸ್ಟ್ ಮಾಡಿಸಲು ಸಿದ್ಧರಿದ್ದೇವೆ ಎಂದು ಬಿಬಿಎಂಪಿ ಕಮಿಷನರ್ ತಿಳಿಸಿದ್ದಾರೆ.
ಈ ನಡುವೆ, ಸಾರಿಗೆ ನೌಕರರ ಸಮಸ್ಯೆ ಆಲಿಸಿ, ಪ್ರಸ್ತಾವನೆ ಸಲ್ಲಿಸಲು ಸರ್ಕಾರದಿಂದ ಸಮಿತಿ ರಚನೆಯಾಗಿದೆ. ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ಅಧ್ಯಕ್ಷತೆಯಲ್ಲಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಎಂಡಿ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕರನ್ನು ಒಳಗೊಂಡ ಐದು ಜನ ಅಧಿಕಾರಿಗಳ ಸಮಿತಿ ರಚಿಸಿದೆ. ಸಾರಿಗೆ ಸಂಸ್ಥೆಯ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆ, ಅಂತರ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ಘಟಕ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ರೂಪಿಸುವ ಕುರಿತು ಈ ಕಮಿಟಿ ಅಧ್ಯಯನ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಸಾರಿಗೆ ನೌಕರರು ಮುಷ್ಕರ ಕೈ ಬಿಡಲು, ಸರ್ಕಾರ 9 ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ನೌಕರರ 9 ಬೇಡಿಕೆಗಳಲ್ಲಿ ಈ ಮೂರು ಇದ್ದವು ಎಂದು ಮೂಲಗಳು ತಿಳಿಸಿವೆ.