ದ.ಕ. ಜಿಲ್ಲೆಯಲ್ಲಿ 40 ಸಾವಿರ ಜನರಿಗೆ ಕೊರೊನಾ ಲಸಿಕೆ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕೊರೊನಾ ಲಸಿಕೆ, ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ತಲುಪುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ40 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಯೋಜಿಸಲಾಗಿದೆಯಂತೆ. ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಲು ಯೋಜನೆ ಹಕಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆ ನೌಕರರು, ಅಧಿಕಾರಿಗಳು, ದಾದಿಯರು, ವೈದ್ಯರು, ಗ್ರೂಪ್ ಡಿ ನೌಕರರು, ಆಂಬ್ಯುಲೆನ್ಸ್ ಸಿಬ್ಬಂದಿ ಇತ್ಯಾದಿಗಳನ್ನು ಪಟ್ಟಿ ಮಾಡಲಾಗಿದೆ. ಪಟ್ಟಿ ಮಾಡಿರುವವರಿಗೆ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕಾಗಿ ಜಿಲ್ಲೆಯಿಂದ 4,667 ಲಸಿಕೆದಾರರನ್ನು ಗುರುತಿಸಲಾಗಿದ್ದು, ಅವರಿಗೆ ತರಬೇತಿ ನೀಡಲು, ಮಾಸ್ಟರ್ ತರಬೇತುದಾರರು ಬೆಂಗಳೂರಿನಿoದ ಆಗಮಿಸುತ್ತಾರೆ ಎಂದು ವರದಿಯಾಗಿದೆ. ವ್ಯಾನ್ಗಳು, ಡೀಪ್ ಫ್ರೀಜರ್ಗಳು, ಐಸ್ ಲೈನ್ಸ್ ರೆಫ್ರಿಜರೇಟರ್ಗಳು, ವಾಕ್-ಇನ್ ಕೂಲರ್ಗಳು ಇತ್ಯಾದಿಗಳು ಸಿದ್ಧವಾಗಿವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯಾರಿ ತಿಳಿಸಿದ್ದಾರೆ. ಇನ್ನು ಎರಡನೇ ಹಂತದಲ್ಲಿ ಪೊಲೀಸರು, ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕ ಕಾರ್ಯಕರ್ತರಿಗೆ ಲಸಿಕೆ ಪಡೆಯುವಲ್ಲಿ ಆದ್ಯತೆ ಸಿಗಲಿದ್ದು, ಮೂರನೇ ಹಂತದಲ್ಲಿ, 50 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ನೀಡಲಾಗುತ್ತದೆ. ಜಿಲ್ಲೆಯಿಂದ ಪ್ರತಿದಿನ ಸರಾಸರಿ 25 ರಿಂದ 30 ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ನವರಾತ್ರಿ ಹಬ್ಬದ ನಂತರ ನಿಯಮಿತವಾಗಿ ಭಾರಿ ಜನಸಂದಣಿ ಇದ್ದು, ಇಲ್ಲಿಯವರೆಗೆ ರೋಗದ ಎರಡನೇ ಅಲೆ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಜನರು ತಾಳ್ಮೆ ಕಳೆದುಕೊಳ್ಳದೆ ಕೊರೊನಾ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. |