ಮೀನು ತಾಜಾವಾಗಿರಲು ಕ್ರಿಮಿನಾಶಕ ಬಳಕೆ ವದಂತಿ: ಜಿಲ್ಲಾಧಿಕಾರಿಗಳಿಗೆ ಮನವಿ
ಉಡುಪಿ: ಉಡುಪಿ ಜಿಲ್ಲೆಯ ಜನತೆ ಅದರಲ್ಲೂ ಮತ್ಸ್ಯೋತ್ಪನ್ನ ಪ್ರಿಯರಿಗೆ ಆತಂಕಕಾರಿ ಸುದ್ಧಿಯೊಂದು ವರದಿಯಾಗಿದೆ. ಮೀನುಗಳನ್ನು ಹೆಚ್ಚು ಸಮಯ ತಾಜಾ ಉಳಿಸಿಕೊಳ್ಳುವ ಸಲುವಾಗಿ ಕ್ರಿಮಿನಾಶಕ ಅದೂ ಮನುಷ್ಯನ ಹೆಣ ಕೆಡದಂತೆ ಉಪಯೋಗಿಸುವ ಫಾರ್ಮಲಿನ್ ಎಂಬ ಕೆಮಿಕಲ್ನ್ನು ಮೀನಿಗೆ ಬಳಸಿ ಅದು ಕೆಡದಂತೆ ಉಪಯೋಗಿಸುತ್ತಿದ್ದಾರೆ ಎಂಬ ವದಂತಿಯೊಂದು ಹಬ್ಬಿದೆ. ಇದೀಗ ಇಂತಹ ಘಟನೆಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸ್ಕಾಡ್ ಇದ್ರೂ ಕೂಡಾ ಇಂತಹ ಘಟನೆ ನಡೆಯುತ್ತಿರುವ ಈ ಸುದ್ಧಿ ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಸದ್ಯ ಜಿಲ್ಲೆಯಲ್ಲಿ ಹರಡಿರುವ ಈ ವದಂತಿಯ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿ ಪಾರ್ಮಾಲಿನ್ ನಂತಹ ಕೆಮಿಕಲ್ ಬಳಕೆ ಮಾಡಿ ಜನರಿಗೆ ವಿಷ ಉಣಿಸುತ್ತಿರುವ ದುಷ್ಟ ವ್ಯವಸ್ಥೆಯ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ ಎಂಬ ನಿಟ್ಟಿನಲ್ಲಿ ಸಾಮಾಜಿಕ ಹೋರಾಟಗಾರ ಆಲ್ವಿನ್ ಅಂದ್ರಾದೆ ಪಾಂಡೇಶ್ವರ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ, ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ ಜಗದೀಶ್ ಅವರು, ತಕ್ಷಣವೇ ಈ ಮಾಫಿಯಾದ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ಚೋರಾಡಿ ಕೃಷ್ಣರಾಜ್ ಶೆಟ್ಟಿ, ವಿನಯ್ ಕುಮಾರ್ ಕಬ್ಯಾಡಿ, ಮತ್ತು ಟೀಮ್ ಅಭಿಮತದ ವಸಂತ್ ಗಿಳಿಯಾರ್ ಉಪಸ್ಥಿತರಿದ್ದರು. ಇನ್ನು, ಉಡುಪಿ ಜಿಲ್ಲೆಯ ಬಹುಪಾಲು ಜನರಿಗೆ ಮೀನು ನಿತ್ಯದ ಆಹಾರ. ಮೀನಿನ ಬಗ್ಗೆ ತಿಳವಳಿಕೆಯುಳ್ಳವರು ಅದರ ರುಚಿ ,ಬಣ್ಣ, ವಾಸನೆಯಿಂದಲೇ ಮೀನಿನ ಪರಿಶುದ್ಧತೆಯನ್ನು ತಿಳಿದು ಕೊಳ್ಳುತ್ತಾರೆ. ಆದರೆ ಇದು ಎಲ್ಲಾ ಸಮಯದಲ್ಲೂ ಸಾಧ್ಯವಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಯಾಕೆಂದರೆ ಎಷ್ಟೋ ಕಡೆಗಳಲ್ಲಿ ಮೀನಿನ ತಾಜಾತನದ ಬಗ್ಗೆ ಅನುಮಾನ ಮೂಡಿದರೂ.., ಅದಕ್ಕೆ ಕೆಮಿಕಲ್ ಬಳಸಿದ್ದಾರೆಯೇ..? ಇಲ್ಲವೇ..? ಎಂಬ ಬಗ್ಗೆ ಚಿಂತನೆ ಮಾಡಲು ಹೋಗುವವರು ಬಹಳ ವಿರಳ. ಈ ಕೆಮಿಕಲ್ ಬಳಕೆ ಇತ್ತೀಚೆಗಿನ ದಿನಗಳಲ್ಲಿ ಹುಟ್ಟಿಕೊಂಡಿರುವ ಸಮಸ್ಯೆಯಲ್ಲ. ಈ ಪ್ರಕ್ರಿಯೆ ಬಹಳ ವರ್ಷಗಳ ಹಿಂದಿನಿಂದಲೂ ಇದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಈ ಹಿಂದೆ ಸರಕಾರದ ಗಮನಕ್ಕೆ ತರಲಾಗಿತ್ತಂತೆ. ಈ ಬಗ್ಗೆ ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗುವ ಭರವಸೆಯನ್ನು ಸರಕಾರ ನೀಡಿತ್ತಾದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಈ ಸುದ್ಧಿ ಮತ್ತೆ ಸದ್ದು ಮಾಡುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಲಾಗಿದೆ. |