ಕಬಕ ರಸ್ತೆ ಅಪಘಾತ: ಹಿರಿಯ ಆರೆಸ್ಸೆಸ್ ಮುಖಂಡ ಮೃತ್ಯು
ಬಂಟ್ವಾಳ: ಪುತ್ತೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಇಂದು ನಸುಕಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಆರೆಸ್ಸೆಸ್ ಹಿರಿಯ ಮುಖಂಡರೊಬ್ಬರು ಮೃತಪಟ್ಟಿದ್ದಾರೆ. ಬಿ.ಸಿ.ರೋಡಿನ ಅಗ್ರಬೈಲ್ ನಿವಾಸಿ, ಆರೆಸ್ಸೆಸ್ ಮಂಗಳೂರು ವಿಭಾಗ ಗ್ರಾಮವಿಕಾಸ ಪ್ರಮುಖರೂ ಆಗಿದ್ದ ವೆಂಕಟರಮಣ ಹೊಳ್ಳ (60) ಮೃತಪಟ್ಟವರು. ನಿನ್ನೆ ಆರೆಸ್ಸೆಸ್ ಬೈಠಕ್ ಮುಗಿಸಿ, ಪುತ್ತೂರಿನಲ್ಲೇ ತಂಗಿದ್ದ ವೆಂಕಟರಮಣ ಅವರು, ಇಂದು ಬೆಳಗ್ಗೆ ಬೈಕ್ ನಲ್ಲಿ ಬಿ.ಸಿ.ರೋಡಿನ ಅಗ್ರಬೈಲ್ ನಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ಅವರು ಸಂಚರಿಸುತ್ತಿದ್ದ ಬೈಕ್ ಪತ್ತೆಯಾಗಿದೆ. |