‘ರಾಜ್ಯ ದೇವಾಡಿಗ ಅಭಿವೃದ್ಧಿ ನಿಗಮ’ ಸ್ಥಾಪಿಸಲು ಮುಖ್ಯ ಮಂತ್ರಿಗೆ ಮನವಿ ನೀಡಲು ನಿರ್ಧಾರ
ಬ್ರಹ್ಮಾವರ: ದೇವಾಡಿಗ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ‘ರಾಜ್ಯ ದೇವಾಡಿಗ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕು, ಈ ಕುರಿತು ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಬೇಕು’ ಎಂಬ ಅಭಿಪ್ರಾಯ ಇಲ್ಲಿನ ಬಾರ್ಕೂರು ಏಕನಾಥೇಶ್ವರೀ ದೇವಸ್ಥಾನದಲ್ಲಿ ನಡೆದ ರಾಜ್ಯದ 58 ದೇವಾಡಿಗ ಸಮಾಜದವರ ಸಭೆಯಲ್ಲಿ ನಿರ್ಧರಿಸಲಾಯಿತು. ದೇವಾಡಿಗ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಆದರೆ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಸಮಾಜವನ್ನು ಸರ್ಕಾರ ಗುರುತಿಸುವಂತೆ ಮಾಡಲು ಅಭಿವೃದ್ಧಿ ನಿಗಮದ ರಚನೆ ಅಗತ್ಯ ಎಂದು ದೇವಾಡಿಗ ಸಮಾಜದ ಮೋಹನ್ದಾಸ್ ಹಿರಿಯಡ್ಕ ಹೇಳಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕಾರ್ಯಾಧ್ಯಕ್ಷ ಡಾ.ಕೆ.ದೇವ ರಾಜ್ ಮಂಗಳೂರು ಮಾತನಾಡಿ, ರಾಜ್ಯದಲ್ಲಿ ದೇವಾಡಿಗ ಸಮಾಜದ ಜನಸಂಖ್ಯೆ 6 ಲಕ್ಷಕ್ಕೂ ಹೆಚ್ಚಿದೆ. ಸಂಘಟಿತ ಪ್ರಯತ್ನದಿಂದ ಸಮಾಜಕ್ಕೆ ಶಕ್ತಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಅಭಿವೃದ್ಧಿ ನಿಗಮ ಬೇಕು ಎಂದರು. ದೇವಳದ ಆಡಳಿತ ವಿಶ್ವಸ್ಥ ಅಣ್ಣಯ್ಯ ಶೇರಿಗಾರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ದೇವಾಡಿಗ, ಕೆ.ಚಂದ್ರಶೇಖರ್, ರಜನಿಕಾಂತ್, ರಮೇಶ್ ವಂಡ್ಸೆ, ಡಾ.ಸುಂದರ್ ಮೊಯ್ಲಿ, ರವೀಂದ್ರ ಮೊಯ್ಲಿ, ಗಣೇಶ್ ದೇವಾಡಿಗ, ವಿಜಯ ಕೊಡವೂರು, ಶಂಕರ ಅಂಕದಕಟ್ಟೆ ಮತ್ತಿತರರು ಇದ್ದರು. |