ಶಾಸಕ ಸುನೀಲ್ ಕುಮಾರ್ ತಾಳಕ್ಕೆ ಕುಣಿಯುವ ಜಿಲ್ಲಾಧಿಕಾರಿ: ಮಂಜುನಾಥ ಪೂಜಾರಿ ಆರೋಪ

ಹೆಬ್ರಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕಾರ್ಕಳ ಶಾಸಕ ಸುನೀಲ್ ಕುಮಾರ್ ತಾಳಕ್ಕೆ ತಕ್ಕಂತೆ ಕುಣಿಯುತ್ತ ಜನತೆಗೆ ತೊಂದರೆ ನೀಡುತ್ತಿದ್ದಾರೆ. ಒಂದು ಪಕ್ಷದ ವಕ್ತಾರ ನಂತೆ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರ ಕೆಲಸ ಮಾಡುತ್ತಿಲ್ಲ. ಅವರಿಗೆ ಪಕ್ಷದ ಸೇವೆ ಮಾಡಬೇಕಿದ್ದರೆ ಅಧಿಕೃತವಾಗಿ ಅದೇ ಪಕ್ಷಕ್ಕೆ ಸೇರಿಕೊಳ್ಳಲಿ ಎಂದು ಹೆಬ್ರಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಗಂಭೀರ ಆರೋಪ ಮಾಡಿದರು.

ಅವರು ಹೆಬ್ರಿಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ‌ ಪಂಚಾಯತ್  ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಶನಿವಾರ ಕಾರ್ಕಳ ತಾಲೂಕಿನ ಕಡ್ತಲ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಾಗಾರಿಯನ್ನು ಬಿಜೆಪಿಯ ನಾಯಕರು, ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮ ‌ಪಂಚಾಯತ್ ಚುನಾವಣೆ ಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ವೀಕ್ಷಣೆ ಮಾಡಿದ್ದಾರೆ.

ಮಾಸ್ಕ್ ಕೂಡ ಹಾಕಿಲ್ಲ. ಇದು ಸರಿಯೇ, ನೀತಿಸಂಹಿತೆ ಪಾಲಿಸುವ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿಯೇ ಈ ರೀತಿ ಮಾಡಿದರೆ ಹೇಗೆ. ಅವರಿಗೊಂದು ಕಾನೂನು ನಮಗೊಂದು ಕಾನೂನ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆ‌ ಯಾವೂದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ . ಎಣ್ಣೆಹೊಳೆಯ 108 ಕೋಟಿ ರೂಪಾಯಿಯ ಡ್ಯಾಮ್ ಕಾಮಗಾರಿಯಿಂದಾಗಿ ಸ್ಥಳೀಯರಿಗೆ ಭಾರಿ ತೊಂದರೆಯಾಗುತ್ತಿದೆ ಎಂದು ಡಿಸಿಗೆ ಮನವಿ ಮಾಡಿದರೂ  ಅವರು ಎಣ್ಣೆ ಹೊಳೆಗೆ ಬೇಟಿ ನೀಡಿಲ್ಲ.  ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬಿಜೆಪಿಯ ಕಾರ್ಯಕರ್ತರೊಂದಿಗೆ ಅವರಿಗೆ ಬೇಕಾದಲ್ಲಿ ಹೋಗುತ್ತಾರೆ ಎಂದು ಮಂಜುನಾಥ ಪೂಜಾರಿ ಹೇಳಿದರು.

ಜಿಲ್ಲೆಯಲ್ಲಿ ಎಸ್ ಪಿ ಸಹಿತ ಪೊಲೀಸ್ ಇಲಾಖೆ ಮಾತ್ರ ನ್ಯಾಯಪರ ಜನಪರವಾದ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಗ್ರಾಮ‌ ಪಂಚಾಯತ್ ನಿಂದ ಕೇಂದ್ರದ ವರೆಗೂ ಜನತೆಗೆ ಬಿಜೆಪಿ ಮೋಸ ಮಾಡಿದೆ.   ಕಸ್ತೂರಿರಂಗನ್ ವರದಿಯನ್ನು ಕೂಡ ಬಿಜೆಪಿಯವರು ಅನುಷ್ಠಾನ ಮಾಡಿ ಬಡವರನ್ನು ಬೀದಿಪಾಲು ಮಾಡುತ್ತಿದ್ದಾರೆ, ಜನತೆಗೆ ಈಗ ಸತ್ಯ ವಿಚಾರ ತಿಳಿಯುತ್ತಿದೆ. ಹೆಬ್ರಿ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯತ್ ನಲ್ಲಿ    ಕಾಂಗ್ರೆಸ್  ಆಡಳಿತ ಬರಲಿದೆ. ಜನತೆಗೆ ಈಗ ಬಿಜೆಪಿಯೇ ಬೇಡವಾಗಿದೆ. ಬಿಜೆಪಿಯಿಂದಾಗಿ ಜನರ ಬದುಕೇ ಕಷ್ಟವಾಗಿದೆ. ಜನತೆಗೂ ತಡವಾಗಿ ಜ್ಞಾನೋದಯವಾಗುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಹೆಬ್ರಿ ತಾಲ್ಲೂಕು ಕಾಂಗ್ರೆಸ್ ಸಾಧನೆ : ಡಾ. ವೀರಪ್ಪ ಮೊಯ್ಲಿ ಮತ್ತು ದಿ.ಗೋಪಾಲ ಭಂಡಾರಿಯವರು ಹೆಬ್ರಿ ತಾಲ್ಲೂಕು ಮಾಡುವ ಮೂಲಕ  ಶಾಶ್ವತ ಕೊಡುಗೆ ನೀಡಿದ್ದಾರೆ.  ಇದು ಕಾಂಗ್ರೆಸ್ ಕೊಡುಗೆ. ಮತದಾನಕ್ಕೆ ಮತ ಕೇಳಲು ನಮಗೆ ಇದೊಂದೇ ಸಾಧನೆ ಸಾಕು ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದರು. ಶಾಸಕರು ಬಿಜೆಪಿಯವರು ಮತ್ತು ಸರ್ಕಾರವನ್ನು ಪ್ರಶ್ನಿಸಿದರೆ ಅಧಿಕಾರಿಗಳ ಮೂಲಕ ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಜನತೆಗೆ ಅನ್ಯಾಯವಾಗುತ್ತಿದೆ ಎಂದು ನೀರೆ ಕೃಷ್ಣ ಶೆಟ್ಟಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಶಂಕರ ಶೇರಿಗಾರ್, ಶಶಿಕಲಾ ದಿನೇಶ್ ಪೂಜಾರಿ, ದಿನೇಶ ಶೆಟ್ಟಿ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!