ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸುವಂತೆ ಕುಯಿಲಾಡಿ ಸರಕಾರವನ್ನು ಒತ್ತಾಯಿಸಲಿ – ಅಶೋಕ್ ಕೊಡವೂರು

ಉಡುಪಿ: ರಾಜ್ಯ ಬಸ್ ಮಾಲಕರ ಸಂಘದ ಖಜಾಂಚಿಗಳು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್‌ರವರು ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಜನ ಸಾಮಾನ್ಯರ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವುದು ಸ್ವಾಗತಾರ್ಹ.

ಸಾರಿಗೆ ನೌಕರರು ತಮ್ಮನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಬೇಡಿಕೆ ಮಂಡಿಸಿದರೂ ಸರಕಾರ ಸ್ಪಂದಿಸದೆ ಇನ್ನೂ ಮಾತುಕತೆಯಲ್ಲಿ ಕಾಲಹರಣ ಮಾಡುತ್ತಿದೆ. ಇದಕ್ಕೆ ಯಾರು ಹೊಣೆ ಎಂಬುದನ್ನು ಕುಯಿಲಾಡಿಯವರು ಹೇಳಬೇಕು. ಇದನ್ನೇ ನೆಪವಾಗಿರಿಸಿಕೊಂಡು ಕುಯಿಲಾಡಿಯವರು ಖಾಸಗಿ ಪ್ರವರ್ತಕರಿಗೆ ರಾಜ್ಯದಲ್ಲಿ ಬಸ್ ಓಡಿಸಲು ಅನುವು ಮಾಡಿಕೊಡಬೇಕಂಬ ಬೇಡಿಕೆ ಇಟ್ಟಿರುವುದನ್ನು ನೋಡಿದರೆ ಬಿಜೆಪಿ ಜಿಲ್ಲಾಧ್ಯಕ್ಷರು ಖಾಸಗಿ ಪ್ರವರ್ತಕರ ಬೆಂಬಲಕ್ಕೆ ನಿಂತಿರುವುದು ಕಂಡುಬರುತ್ತದೆ.

ಖಾಸಗಿ ಪ್ರವರ್ತಕರಿಗೆ ರಾಜ್ಯದಲ್ಲಿ ಬಸ್ಸು ಓಡಿಸಲು ಅನುವು ಮಾಡಿಕೊಟ್ಟರೆ ತೆರಿಗೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹಣ ಸರಕಾರದ ಬೊಕ್ಕಸಕ್ಕೆ ಸೇರುತ್ತದೆ ಎನ್ನುವ ಕುಯಿಲಾಡಿಯವರ ಹೇಳಿಕೆಯು ಈಗಾಗಲೇ ಇರುವ ಸಾರಿಗೆ ನೌಕರರನ್ನು ಬೀದಿಗೆ ತಳ್ಳುವ ಹುನ್ನಾರವಾಗಿದೆ.

ಖಾಸಗಿಯವರಿಗೆ ಬಸ್ ಪರವಾನಿಗೆ ನೀಡಿದಲ್ಲಿ ಪ್ರಯಾಣಿಕರಿಗೆ ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಸೇವೆ ಸಿಗುತ್ತದೆ ಎನ್ನುವ ಕುಯಿಲಾಡಿಯವರ ಹೇಳಿಕೆ ಜನತೆಯ ಹಾದಿ ತಪ್ಪಿಸುವಂತಿದೆ. ಸರಕಾರಿ ಸಾರಿಗೆಗಿಂತಲೂ ದುಪ್ಪಟ್ಟು ಪ್ರಯಾಣ ದರವನ್ನು ಖಾಸಗಿಯವರು ವಸೂಲು ಮಾಡುವಾಗ ಇವರ ಸ್ಪರ್ಧಾತ್ಮಕ ದರ ಹೇಳಿಕೆ ಎಷ್ಟು ಸಮಂಜಸ. ಈಗಾಗಲೇ ಸಾರಿಗೆ ಮುಷ್ಕರದ ದುರ್ಲಾಭ ಪಡೆದು ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ಸೋತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರುರವರು, ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಗೆ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!