ಉಡುಪಿ: ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಕಚೇರಿ ಉದ್ಘಾಟನೆ
ಉಡುಪಿ: ಸ್ವಚ್ಛ, ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ಎಂಬ ಧ್ಯೇಯವನ್ನಿಟ್ಟು ಕೊಂಡು ಇತ್ತೀಚೆಗೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಡುಪಿ ನಗರ ಘಟಕದ ಕಚೇರಿಯ ಉದ್ಘಾಟನೆಯು ಕಿನ್ನಿಮೂಲ್ಕಿ ಸಂದೀಪ್ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಯುನೈಟೆಡ್ ಬಾಸೆಲ್ ಮಿಷನ್ ಜುಬಿಲಿ ಚರ್ಚ್ ಇಲ್ಲಿಯ ಫಾಸ್ಟರ್ ಇಂಚಾರ್ಜ್ ರೆವರೆಂಡ್ ಸಂತೋಷ್ ಎ ಉದ್ಘಾಟಿಸಿ, ಆಶೀರ್ವದಿಸಿದರು.
ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪಕ್ಷದ ಪ್ರಮುಖ ಪದಾಧಿಕಾರಿಗಳ ಜೊತೆ ಸರಳ ಸಮಾರಂಭ ನಡೆಯಿತು. ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ರೆವರೆಂಡ್ ಸಂತೋಷ್ ಎ, ಸ್ವಚ್ಛ ಪ್ರಾಮಾಣಿಕ ಜನಪರ ಸೇವೆಗಾಗಿ ಪಕ್ಷವನ್ನು ಸ್ಥಾಪಿಸಿದ್ದೀರಿ. ಉಡುಪಿ ನಗರದಲ್ಲಿ ಮತ್ತು ರಾಜ್ಯದಲ್ಲಿ ನಿಮ್ಮ ಪಕ್ಷದಿಂದ ಉತ್ತಮ ಜನಪರ ಸೇವೆ ಕೈಗೊಳ್ಳಿ. ನಿಮ್ಮ ಜೊತೆ ದೇವರ ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸಿದರು.
ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ಮಾತನಾಡುತ್ತಾ, ರಾಜ್ಯ ಸಂಕಷ್ಟದಲ್ಲಿದ್ದಾಗ ದೇಶದ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿ ಸಹಿತ ರಾಜ್ಯದ ಜನತೆಗೆ ಸಹಕಾರ ನೀಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ಇಲ್ಲದಿದ್ದರೂ, ನರೇಂದ್ರ ಮೋದಿ ದೊಡ್ಡ ಪ್ಯಾಕೇಜನ್ನು ಪಶ್ಚಿಮ ಬಂಗಾಳಕ್ಕೆ ಘೋಷಿಸಿದ್ದಾರೆ. ಯಾಕೆಂದರೆ ಅಲ್ಲಿ ಮುಂದೆ ಚುನಾವಣೆ ಇದೆ. ಮಮತಾ ಬ್ಯಾನರ್ಜಿ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಪ್ಯಾಕೇಜನ್ನು ಘೋಷಿಸಿದ್ದಾರೆ. ಆದರೆ ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿದರೂ, ಪ್ರಧಾನಿ ರಾಜ್ಯದ ಬಗ್ಗೆ ಅಸಡ್ಡೆ ತೋರಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸಹಿತ ಹಲವು ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಎದುರಿಸಲು ಸೋತಿವೆ. ಇಂತಹ ಪರಿಸ್ಥಿತಿಯಲ್ಲಿ ಜನರಿಂದಲೇ ಜನರಿಗೋಸ್ಕರ ಸ್ವಚ್ಛ ಪ್ರಾಮಾಣಿಕ ಜನಪರ ಸೇವೆ ನಡೆಸಲು ನಮ್ಮ ಪಕ್ಷ ಅಸ್ತಿತ್ವಕ್ಕೆ ಬಂದಿದೆ ಎಂದರು.
‘ನಮ್ಮ ಮನೆ – ನಮ್ಮ ಮರ’ ಕಾರ್ಯಕ್ರಮಗಳನ್ನು ನಡೆಸಿ, ಪರಿಸರ ಸಂರಕ್ಷಿಸುತ್ತಿರುವ ರವಿರಾಜ್ ಎಚ್ ಪಿ ಅವರನ್ನು ವಿಶ್ವ ಪರಿಸರ ದಿನದ ಅಂಗವಾಗಿ ಸನ್ಮಾನಿಸಲಾಯಿತು. ಪಕ್ಷದ ಧ್ಯೇಯವನ್ನು ಮೆಚ್ಚಿಕೊಂಡು ಹಲವಾರು ಸದಸ್ಯರು ಪಕ್ಷಕ್ಕೆ ಸೇರ್ಪಡೆಗೊಂಡರು.
ರೆ. ಸ್ಟೀಫನ್, ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ ಉಪಸ್ಥಿತರಿದ್ದರು. ಅರವಿಂದ ನಾಯಕ್, ಸಫನ್, ದಿನೇಶ್ ರಾಮ್ ಮತ್ತಿತರು ಉಪಸ್ಥಿತರಿದ್ದರು. ಉದ್ಯಮಿ ಮತ್ತು ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಕರ್ಕಡ ಸ್ವಾಗತಿಸಿದರೆ, ಉಡುಪಿ ನಗರ ಅಧ್ಯಕ್ಷ ಯು ಯಜ್ಞೇಶ್ ಆಚಾರ್ಯ ವಂದಿಸಿದರು.