ಗ್ರಾ.ಪಂ.ಚುನಾವಣೆ: ಮತ್ತಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಚುನಾಚಣಾ ಆಯೋಗದ ಸೂಚನೆ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗಳು ಪಕ್ಷ ರಹಿತ ಚುನಾವಣೆಯಾಗಿರುತ್ತದೆ. ಆದರೆ, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿಯೂ ಪ್ರಚಾರಕಾರ್ಯದಲ್ಲಿ ಭಾಗಿಯಾಗುವ, ಸಭೆ ಸಮಾರಂಭಗಳನ್ನು ನಡೆಸುವ, ರಾಜಕೀಯ ಮುಖಂಡರುಗಳ ಭಾವಚಿತ್ರಗಳನ್ನು ಕರ ಪತ್ರಗಳಲ್ಲಿ ಮುದ್ರಿಸಿ ಪಕ್ಷಗಳ ಬಾವುಟ ಮತ್ತು ಚಿಹ್ನೆಯನ್ನು ಬಳಸಿಕೊಂಡು ಪ್ರಚಾರ ಮಾಡುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್  ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಚುನಾವಣಾ ಆಯೋಗ ಕೆಲವೊಂದು ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಚುನಾವಣಾ ಆಯೋಗ, ಎಲ್ಲ ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಸ್ಪರ್ಧಾಳುಗಳಿಗೆ ಕಾನೂನು ಉಲ್ಲಂಘನೆಯಾಗದಂತೆ ನಡೆದುಕೊಳ್ಳಲು ಕೆಲವೊಂದು ನಿಯಮಗಳನ್ನು ಜಾರಿ ಮಾಡಿದೆ. ಅದರಂತೆ, ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳನ್ನು ಏರ್ಪಡಿಸಿ, ವೇದಿಕೆಯ ಮೇಲೆ ಪಕ್ಷದ ಬಾವುಟ, ಬ್ಯಾನರ್‌ಗಳನ್ನು ಬಳಸುವಂತಿಲ್ಲ.

ಸ್ಪರ್ಧಿಸುವ ಅಭ್ಯರ್ಥಿಗಳನ್ನು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತ ನೀಡಲು ಮತದಾರರನ್ನು ಕೋರುವಂತಿಲ್ಲ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ರಾಜಕೀಯ ಮುಖಂಡರ ಭಾವಚಿತ್ರ ಪಕ್ಷದ ಚಿಹ್ನೆ ಇರುವ ಕರಪತ್ರಗಳನ್ನು ಮುದ್ರಿಸುವುದು/ಹಂಚುವುದು ಮಾಡುವಂತಿಲ್ಲ ಹಾಗೂ ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್‌ಗಳು, ವ್ಯಾಟ್ ಮತ್ತು ಬಂಟಿಂಗ್‌ಗಳ ಮೂಲಕ ಪ್ರಚಾರ ಮಾಡುವಂತಿಲ್ಲ ಮತ್ತು  ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಟಿ.ವಿ.ಮಾಧ್ಯಮಗಳು, ಪತ್ರಿಕೆಗಳ ಮೂಲಕ ರಾಜಕೀಯ ಮುಖಂಡರ ಭಾವಚಿತ್ರ ಮತ್ತು ಪಕ್ಷಿಗಳ ಚಿಹ್ನೆಗಳನ್ನು ಬಳಸಿ ಜಾಹೀರಾತು ನೀಡುವಂತಿಲ್ಲ ಎಂದು ಸೂಚನೆ ನೀಡಿದೆ.

ಇನ್ನು ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಈ ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ, ಅಂತಹ ಚುನಾವಣೆ ಪ್ರಚಾರ ಮಾಡುವವರ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿಸುವಂತೆ   ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಚುನಾಚಣಾ ಆಯೋಗದ ಅಧೀನ ಕಾರ್ಯದರ್ಶಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!