ಕೌನ್ ಬನೇಗಾ ಕರೋಡ್‌ಪತಿ ಹಾಟ್‌ಶೀಟ್ ‌ನಲ್ಲಿ ಉಡುಪಿಯ ವಿದ್ಯಾರ್ಥಿ

ಉಡುಪಿ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡ್‌ಪತಿಯ ವಿದ್ಯಾರ್ಥಿ ವಿಶೇಷ ಸಂಚಿಕೆಯಲ್ಲಿ ಉಡುಪಿಯ ವಿದ್ಯಾರ್ಥಿ ಅನಾಮಯ ಯೋಗೇಶ್ ದಿವಾಕರ್ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ. ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೇಶ್ ದಿವಾಕರ್ ಅವರು, ಡಿ.15ರಿಂದ 17ರವರೆಗೆ ಕೆಬಿಸಿಯ ‘ಸ್ಟುಡೆಂಟ್ ಸ್ಪೆಷಲ್’ನಲ್ಲಿ ಅಮಿತಾಬ್ ಬಚ್ಚನ್ ಎದುರು ಹಾಟ್‌ಶೀಟ್‌ನಲ್ಲಿ ಕುಳಿತುಕೊಳ್ಳುವ ಅರ್ಹತೆ ಪಡೆದ ದೇಶದ ಎಂಟು ಮಂದಿ ಫೈನಲಿಸ್ಟ್ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಕೆಬಿಸಿಯ ಸ್ಟುಡೆಂಟ್ ಸ್ಪೆಷಲ್ ಸಪ್ತಾಹಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲುವ ಸಲುವಾಗಿ, ವೇದಾಂತ ಆನ್‌ಲೈನ್ ಲರ್ನಿಂಗ್ ಆಪ್ ಅಕ್ಟೋಬರ್ ೫ರಿಂದ ೨೫ರವರೆಗೆ ಆನ್‌ಲೈನ್ ಕ್ವಿಝ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ದೇಶಾದ್ಯಂತದ 1.5 ಲಕ್ಷ ಮಂದಿ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಆರಂಭಿಕ ಸ್ಪರ್ಧೆಯ ಬಳಿಕ ಅಂತಿಮ ಸುತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸರದಿ ಕ್ವಿಝ್ ಪರೀಕ್ಷೆಗೊಳಪಡಿಸಿ, ಸಂದರ್ಶನಗಳನ್ನು ನಡೆಸಿ ಅಂತಿಮವಾಗಿ ಡಿ.14ರಿಂದ 17ರವರೆಗೆ ಪ್ರಸಾರಗೊಳ್ಳುವ ‘ಕೆಬಿಸಿ ಸ್ಟುಡೆಂಟ್ ಸ್ಪೆಷಲ್’ಗೆ ಎಂಟು ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಕಾರ್ಯಕ್ರಮ ಸೋನಿ ಟಿವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ.

ಅಜ್ಜರಕಾಡಿನಲ್ಲಿ ತಂದೆ, ತಾಯಿ, ಅಕ್ಕ ಹಾಗೂ ಅಜ್ಜಿಯೊಂದಿಗೆ ವಾಸವಾಗಿರುವ ಅನಾಮಯನಿಗೆ ಕಾರುಗಳೆಂದರೆ ವಿಪರೀತ ಮೋಹ. ಅಲ್ಲದೆ,  ದೊಡ್ಡವನಾಗಿ ತನ್ನದೇ ಆದ ‘ಸ್ವಂತ ಕಾರು ತಯಾರಿಕಾ ಕಂಪೆನಿ’ಯನ್ನು ಆರಂಭಿಸುವ ಬಹುದೊಡ್ಡ ಕನಸು ಹೊಂದಿದ್ದಾನೆ. ಇದಕ್ಕಾಗಿ ಕೆಬಿಸಿಯಲ್ಲಿ ಚೆನ್ನಾಗಿ ಉತ್ತರಿಸಿ ಸಾಧ್ಯವಿದ್ದಷ್ಟು ಹೆಚ್ಚು ಹಣವನ್ನು ಗೆಲ್ಲಬೇಕೆಂಬ ಗುರಿಯನ್ನು ಹೊಂದಿದ್ದಾನೆ. ಅಲ್ಲದೆ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವ ಈತ ಈಗಾಗಲೇ ತನ್ನ ‘ಕನಸಿನ 72 ಕಾರು’ಗಳ ಹೆಸರುಗಳನ್ನು ಬರೆದಿಟ್ಟಿದ್ದು, ಇದರೊಂದಿಗೆ, ತನ್ನ ಆಯ್ಕೆಯ ಐದು ಸೂಪರ್ ಕಾರುಗಳ ಕುರಿತು ಪಟಪಟನೆ ಹೇಳುತ್ತಾನೆ.

Leave a Reply

Your email address will not be published. Required fields are marked *

error: Content is protected !!