ಈಗ ನಿರಂಕುಶ ಆಡಳಿತ, ನಾನು ಪ್ರಧಾನಿ ಆಗಿದ್ದರೆ ಕಾಂಗ್ರೆಸ್ ಸೋಲುತ್ತಿರಲಿಲ್ಲ: ಪ್ರಣವ್ ಆತ್ಮ ಚರಿತ್ರೆಯಲ್ಲಿ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರದ್ದು ಒಂದು ರೀತಿಯಲ್ಲಿ ನಿರಂಕುಶಾಧಿಕಾರಿ ಶೈಲಿಯ ಕಾರ್ಯವೈಖರಿ, ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರಿಗೆ ಸಮ್ಮಿಶ್ರ ಸರ್ಕಾರ ಉಳಿಸುವ ಕೆಲಸದಲ್ಲಿ ನಿರತರಾಗಿದ್ರಿಂದ ಅದು ಸರ್ಕಾರದ ಆಡಳಿತವನ್ನು ಹಾನಿಗೊಳಿಸಿತು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪಕ್ಷದ ವ್ಯವಹಾರಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ತಮ್ಮ ಆತ್ಮ ಚರಿತ್ರೆಯ ನಾಲ್ಕನೇ ಸಂಪುಟದಲ್ಲಿ ಬರೆದುಕೊಂಡಿದ್ದಾರಂತೆ. ಇದು ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿದೆ.
ಪ್ರಣಬ್ ಮುಖರ್ಜಿಯವರು ತೀರಿಹೋಗಿದ್ದು ಇದೇ ವರ್ಷ ಆಗಸ್ಟ್ 31ರಂದು. ಅದಕ್ಕೂ ಮುನ್ನ ತಮ್ಮ ನೆನಪುಗಳನ್ನು ಆತ್ಮಚರಿತ್ರೆಯಲ್ಲಿ ಬರೆಯುವ ಕೆಲಸ ಮುಗಿಸಿದ್ದರು. ತಿಂಗಳುಗಳ ಕಾಲ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಾ ಅಸುನೀಗಿದರು.
ನಾನು ರಾಷ್ಟ್ರಪತಿಯಾದ ನಂತರ ಕಾಂಗ್ರೆಸ್ ನಲ್ಲಿ ಪಕ್ಷದ ನಾಯಕತ್ವ ರಾಜಕೀಯದ ಮೇಲೆ ಗಮನ ಕೇಂದ್ರೀಕರಿಸುವ ಶಕ್ತಿಯನ್ನು ಕಳೆದುಕೊಂಡಿತು. ಸಮ್ಮಿಶ್ರ ಸರ್ಕಾರವನ್ನು ಉಳಿಸುವುದರಲ್ಲಿಯೇ ಡಾ ಮನಮೋಹನ್ ಸಿಂಗ್ ನಿರತರಾಗಿದ್ದರು, ಇದು ಆಡಳಿತದ ಮೇಲೆ ತೀವ್ರ ಪರಿಣಾಮ ಬೀರಿತು ಎಂದು ಪುಸ್ತಕದಲ್ಲಿ ಬರೆದಿದ್ದಾರೆ ಪ್ರಣಬ್ ಮುಖರ್ಜಿ.
ನಾನು ಪ್ರಧಾನಿ ಆಗಿದ್ದರೆ ಕಾಂಗ್ರೆಸ್ ಸೋಲುತ್ತಿರಲಿಲ್ಲ: ಪಕ್ಷದ ನಾಯಕತ್ವ ವನ್ನು ಕೆಲ ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿರುವ ಹಾಗೂ ಹೆಚ್ಚಿನ ಅವಧಿಗೆ ಸೋನಿಯಾ ಅವರು ಅಧ್ಯಕ್ಷ ರಾಗಿ ಮುಂದುವರಿಯುವುದಿಲ್ಲ ಎನ್ನುವ ಸೂಚನೆಗಳು ದೊರೆಯುತ್ತಿರುವ ವೇಳೆಯ, ‘ಕಾಂಗ್ರೆಸ್ನ ವ್ಯವಹಾರಗಳನ್ನು ನಿಭಾಯಿಸಲು ಸೋನಿಯಾ ಗಾಂಧಿ ‘ಅಸಮರ್ಥ’ ರಾಗಿದ್ದರು’ ಎನ್ನುವ ಮುಖರ್ಜಿ ಅವರ ಅಭಿಪ್ರಾಯ ಹೊರಬಿದ್ದಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ತಮ್ಮ ಮೊದಲ 5 ವರ್ಷಗಳ ಅವಧಿಯಲ್ಲಿ ನಿರಂಕುಶಾಧಿಕಾರಿಯಂತೆ ಆಡಳಿತ ನಡೆಸಿದ್ದು ಕಂಡುಬರುತ್ತದೆ. ಇದರಿಂದ ನ್ಯಾಯಾಂಗ ಮತ್ತು ಶಾಸಕಾಂಗಗಳ ಮಧ್ಯೆ ಸಂಬಂಧ ಕಹಿಯಾದಂತೆ ಕಂಡುಬಂತು. ನರೇಂದ್ರ ಮೋದಿಯವರ ಎರಡನೇ ಆಡಳಿತ ಅವಧಿಯಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗಗಳ ಮಧ್ಯೆ ಸಂಬಂಧ ಸುಧಾರಣೆಯಾಗುತ್ತದೆಯೇ, ಇಬ್ಬರ ಮಧ್ಯೆ ಅರ್ಥೈಸಿಕೊಳ್ಳುವಿಕೆ ಹೆಚ್ಚಾಗುತ್ತದೆಯೇ ಎಂದು ಕಾಲವೇ ನಿರ್ಧರಿಸಲಿದೆ ಎಂದು ಪ್ರಣಬ್ ಮುಖರ್ಜಿ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಇನ್ನು ಸೋನಿಯಾ ಗಾಂಧಿಯವರ ನಾಯಕತ್ವದ ಬಗ್ಗೆ ಕಟುವಾಗಿ ಟೀಕಿಸಿರುವ ಪ್ರಣಬ್ ಮುಖರ್ಜಿ, ಸೋನಿಯಾ ಗಾಂಧಿಯವರಿಗೆ ಪಕ್ಷದ ವ್ಯವಹಾರಗಳನ್ನು, ನಾಯಕತ್ವವನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ, ಸದನದಲ್ಲಿ ಡಾ ಮನಮೋಹನ್ ಸಿಂಗ್ ಅವರ ದೀರ್ಘ ಸಮಯದ ಗೈರು ಬೇರೆ ಸಂಸದರೊಂದಿಗೆ ವೈಯಕ್ತಿಕವಾಗಿ ಸಂಪರ್ಕ ಹೊಂದಲು ಸಾಧ್ಯವಾಗುತ್ತಿರಲಿಲ್ಲ, ಇದರಿಂದ ಕಾಂಗ್ರೆಸ್ ಪಕ್ಷ, ಸರ್ಕಾರದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದಿದ್ದಾರೆ.