ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಕಡಿತ: ಮುಖ್ಯಮಂತ್ರಿಗೆ ಮನವಿ
ಉಡುಪಿ, ಡಿ.11: ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಮೈಸೂರು ಮುಸ್ಲಿಂ ಚಿಂತಕರ ಚಾವಡಿಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳು ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ರಾಜ್ಯದ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬುದ್ಧ, ಪಾರ್ಸಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ ಯೋಜನೆ ಗಳಿಗೆ ನಿಗದಿಗೊಳಿಸಲಾದ ಅನುದಾನ ಕಡಿತಗೊಳಿಸಿರುವ ಕ್ರಮ ಖಂಡ ನೀಯ. ಬಿಜೆಪಿ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ರದ್ದು ಮಾಡಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಹಿಂದಿನ ಸರಕಾರಗಳು ಜಾರಿಯಲ್ಲಿಟ್ಟಿದ್ದ ಕಾಲೋನಿ ಅಭಿವೃದ್ದಿ ಯೋಜನೆ, ಶಾದಿಭಾಗ್ಯ ಯೋಜನೆಗಳನ್ನು ರದ್ದುಗೊಳಿಸಲಾಗಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಪರೀಕ್ಷೆ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಯೋಜನೆಗಳ 2019-20ನೇ ಸಾಲಿನ ಅನುದಾನ ವನ್ನು ಈವರೆಗೆ ಬಿಡುಗಡೆಗೊಳಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಆರ್ಥಿಕ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಂಶೋಧನೆ (ಪಿ.ಎಚ್.ಡಿ./ಎಂ.ಫೀಲ್) ಕೈಗೊಳ್ಳಲು ಪ್ರತಿ ತಿಂಗಳು ನೀಡಲಾಗುತ್ತಿದ್ದ ಪ್ರೋತ್ಸಾಹಧನ 25000ರೂ.ವನ್ನು 8333 ರೂ.ಗೆ ಕಡಿತಗೊಳಿಸಿ ಸಂಶೋಧನೆ ಯನ್ನು ಪೂರ್ಣಗೊಳಿಸದಂತಹ ವಾತಾವರಣ ನಿರ್ಮಿಸಿದೆ. ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್ -ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ 2019-20 ನೇ ಸಾಲಿನಲ್ಲಿ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸದೇ ಇರುವದರಿಂದ ಶೇ.೫೦ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿ ವೇತನ ಪಡೆಯಲು ಸಾದ್ಯವಾಗಿಲ್ಲ ಎಂದು ದೂರಲಾಗಿದೆ.
ಸರಕಾರದಲ್ಲಿ ಯಾವುದೇ ಇಲಾಖೆಗೂ ಇರದ ಅನುದಾನ ಕಡಿತ ಕೇವಲ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮಾತ್ರ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ರಾಜ್ಯ ಸರಕಾರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಯಾವುದೇ ಹೊಸ ಯೋಜನೆ ಜಾರಿಗೊಳಿಸದೆ ಇದ್ದರೂ ಈಗಾಗಲೇ ಜಾರಿ ಯಲ್ಲಿರುವ ಎಲ್ಲ ಯೋಜನೆ ಗಳನ್ನು ಮುಂದುವರೆಸಬೇಕು. ಈ ಯೋಜನೆ ಗಳನ್ನು ಮುಂದುವರೆಸಲು ಬೇಕಾಗುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಅಧ್ಯಕ್ಷ ಶಭಿ ಅಹಮದ್ ಕಾಝಿ, ಸಾಮಾಜಿಕ ಕಾರ್ಯಕರ್ತ ಎಂ.ಪಿ.ಮೊಯ್ದಿನಬ್ಬ, ಬ್ಯಾರಿ ಸಾಹಿತ್ಯ ಪರಿಷತ್ ಉಡುಪಿ ಅಧ್ಯಕ್ಷ ಎಸ್.ಪಿ.ಉಮರ್ ಫಾರೂಕ್, ಪಡುಬಿದ್ರಿ ಯೂತ್ ಫೌಂಡೇಶನ ಅಧ್ಯಕ್ಷ ಅಬ್ದುಲ ಹಮೀದ್, ಜಮಾಅತೆ ಇಸ್ಲಾಮೀ ಹಿಂದ್ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಇಕ್ಬಾಲ ಸೂಫಿ ಕನ್ನಂಗಾರ್ ಉಪಸ್ಥಿತರಿದ್ದರು.