ಎಚ್ ಡಿಕೆ ಬಳಿ ಬೇನಾಮಿ ಜಮೀನಿದ್ದು, ಅದರ ರಕ್ಷಣೆಗೆ ಭೂ ಕಾಯ್ದೆ ಬೆಂಬಲಿಸಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ಬಳಿ ಬೇನಾಮಿ ಜಮೀನಿದ್ದು, ಅದನ್ನು ಉಳಿಸಿಕೊಳ್ಳಲು ಭೂ ಸುಧಾರಣೆ ಕಾಯ್ದೆಗೆ ಬೆಂಬಲ ನೀಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ತೆರಳಿ ರೈತ ಮುಖಂಡರ ಜತೆ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕುಮಾರಸ್ವಾಮಿ ಬೇನಾಮಿ ಭೂಮಿ ಮೇಲಿರುವ ಎಲ್ಲ ಪ್ರಕರಣಗಳನ್ನು ಸರ್ಕಾರ ವಜಾ ಮಾಡಿದೆ. ಹೀಗಾಗಿ ಸರ್ಕಾರದ ಪರ ಕುಮಾರಸ್ವಾಮಿ ಇದ್ದಾರೆ ಎಂದು ಆರೋಪಿಸಿದರು.
 
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿರುವ ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು. ತಮ್ಮ ಸ್ವಾರ್ಥಕ್ಕಾಗಿ ಕೃಷಿ ವಿರೋಧಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು. 

ಯಡಿಯೂರಪ್ಪ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಮೂರು ಬಾರಿ ಹಸಿರು ಶಾಲು ಹಾಕಿ ಪ್ರಮಾಣವನ ಸ್ವೀಕಾರ ಮಾಡಿದ್ದಾರೆ. ಆದರೆ ಈಗ ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ಎಪಿಎಂಸಿ ಕಾರ್ಪೊರೇಟ್ ಕಂಪನಿಯ ಪರವಾಗಿರುವ ಮಸೂದೆಯಾಗಿದೆ. ಇದನ್ನು ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹೇರಿದೆ. ನಿರ್ಮಲಾ ಸೀತಾರಾಮನ್ ಎಪಿಎಂಸಿ ಮುಚ್ಚಲು ಇದು ಸಕಾಲ ಎಂದಿದ್ದಾರೆ. ಅವರ ಉದ್ದೇಶವೇ ಎಪಿಎಂಸಿಯನ್ನು ಮುಚ್ಚುವುದಾಗಿದೆ ಎಂದರು. 

ಇನ್ನು ಮುಂದೆ ರೈತರು ಅಂಬಾನಿ, ಅಧಾನಿ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ. ರೈತರ ಸ್ವಾಭಿಮಾನವನ್ನು ಪಣಕ್ಕಿಡುವ, ರೈತರಿಗೆ ದ್ರೋಹ ಬಗೆಯುವ ಕಾಯ್ದೆ ಇದಾಗಿದೆ ಎಂದು ಆರೋಪಿಸಿದರು. 

ಚುನಾವಣಾ ಉದ್ದೇಶದಿಂದ ಕಾಂಗ್ರೆಸ್ ರೈತರ ಬೆಂಬಲಕ್ಕೆ ಬರಲಿಲ್ಲ. ಪಕ್ಷ ಎಂದೆಂದಿಗೂ ರೈತರ ಪರವೇ ಇರುತ್ತದೆ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬಂದಲ್ಲಿ ಈಗ ತಂದಿರುವ ಮೂರು‌ ಕಾಯ್ದೆ ಕೈ ಬಿಡುತ್ತೇವೆ. ಇದು ಸತ್ಯ, ನಾನು ನನ್ನ ಮಾತಿಗೆ ಬದ್ಧವಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. 

ನಾನು ‌ಕೂಡ ರೈತನ ಮಗ. ರೈತ ಸಂಘಟನೆ ಚಳುವಳಿಯಲ್ಲಿ ಭಾಗಿಯಾಗಿದ್ದೆ. ಚುನಾವಣೆಗೆ ಅವಕಾಶ ಇಲ್ಲದ ಕಾರಣ ನಾನು ಹೊರ ಬಂದೆನಾದರೂ ಯಾವಾಗಲೂ ನಾನು ರೈತರ ಪರ. ಇದೀಗ ದೇಶಾದ್ಯಂತ ರೈತರ ಹೊರಾಟ ಪ್ರಾರಂಭವಾಗಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಎಪಿಎಂಸಿ, ಭೂ ಸುಧಾರಣೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗಳು ಜನ ವಿರೋಧಿ ಕಾಯ್ದೆಗಳು. ರೈತ, ಕಾರ್ಮಿಕ, ದಲಿತ ಮೂರು ಜನ ಇಲ್ಲಿದ್ದೇವೆ. ಕೇವಲ ಚುನಾವಣೆ ಎಂದು ಬರಲಿಲ್ಲ. ನಿಮ್ಮ ಹೋರಾಟದಲ್ಲಿ ನಮ್ಮ ಬೆಂಬಲವಿದೆ. ರೈತರ ಭೂಮಿ ರೈತರ ಬಳಿಯೇ ಇರಬೇಕು. ಆದರೆ ಬಿಜೆಪಿ ನಾಯಕರು ಅದನ್ನು ಹಣವಂತರಿಗೆ ಮಾರಲು ಹೊರಟಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!