ಪ್ರಚೋದನಕಾರಿ ಗೋಡೆ ಬರಹ – ಆರೋಪಿಗಳು ಹತ್ತು ದಿನ ಪೊಲೀಸ್ ಕಸ್ಟಡಿಗೆ

ಮಂಗಳೂರು: ಮಂಗಳೂರು ನಗರದ ಎರಡು ಕಡೆಗಳಲ್ಲಿ ಕಾಣಿಸಿಕೊಂಡ ಉಗ್ರರ ಪರ ಗೋಡೆ ಬರಹಗಳ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟಿರುವ ಇಬ್ಬರು ಆರೋಪಿಗಳನ್ನು ಹತ್ತು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಪೊಲೀಸರು ಆರೋಪಿಗಳಿಬ್ಬರನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ಮನವಿಯಂತೆ ನ್ಯಾಯಾಲಯವು ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಇನ್ನು ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಮಾಝ್‌ನ ಬಳಿ ಇದ್ದ ಲಾಪ್‌ಟಾಪ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರುಅದರಲ್ಲಿರುವ ಡೇಟಾವನ್ನು ರಿಟ್ರೈವ್ ಮಾಡಲು ತಂತ್ರಜ್ಞರಿಗೆ ನೀಡಿದ್ದು, ಲಾಪ್‌ಟಾಪ್‌ನಲ್ಲಿರುವ ದಾಖಲೆಗಳು ಪೊಲೀಸರ ತನಿಖೆಗೆ ಹೆಚ್ಚಿನ ಬಲ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾರೀಕ್‌ಗೆ ವಿದೇಶದಲ್ಲಿರುವ ಓರ್ವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದ್ದು, ಈ ವ್ಯಕ್ತಿಯ ಸಲಹೆಯ ಮೇರೆಗೆ ಗೋಡೆ ಬರಹಗಳನ್ನು ಬರೆದಿದ್ದ ಎನ್ನಲಾಗಿದೆ. ಅಲ್ಲದೇ, ಆ ವ್ಯಕ್ತಿಯೊಂದಿಗೆ ಇಂಟರ್‌ನೆಟ್ ಕರೆಗಳ ಮೂಲಕ ಸಂವಹನ ನಡೆಸುತ್ತಿದ್ದು, ಈ ಕೃತ್ಯಕ್ಕೆ ನಿರ್ದೇಶನ ನೀಡಿದ ವ್ಯಕ್ತಿ ಹಾಗೂ ಈ ಘಟನೆಯಲ್ಲಿ ಭಾಗಿಯಾದ ಸದಸ್ಯರು ಪುಣೆಯ ವಾಟ್ಸಾಪ್ ಗುಂಪಿನಲ್ಲಿರುವವರು ಎಂಬ ಮಾಹಿತಿಯ ಹಿನ್ನೆಲೆ ಪೊಲೀಸರು ಇನ್ನಷ್ಟು ಹೆಚ್ಚಿನ ತನಿಖೆ ಮಾಡಲು ತೀರ್ಮಾನಿಸಿದ್ದಾರೆ.

ಒಂದು ವೇಳೆ ತನಿಖೆ ತೀವ್ರಗೊಂಡು ಇನ್ನಷ್ಟು ಮಾಹಿತಿ ಲಭ್ಯವಾದರೆ, ರಾಷ್ಟ್ರೀಯ ತನಿಖಾ ತಂಡದಿಂದಲೂ ಕೂಡಾ ಆರೋಪಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!