ತೈಲ – ಅಡುಗೆ ಅನಿಲ ಬೆಲೆ ಏರಿಕೆ: ಬಿಜೆಪಿ ನಾಯಕರು ಮೌನಕ್ಕೆ ಶರಣು
ಉಡುಪಿ: ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನಿರಂತರವಾಗಿ ಏರುಗತಿಯತ್ತ ಸಾಗುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಗಳ ಬೆಲೆ ಏರಿಕೆ ಕಡಿಮೆಯಿದ್ದರೂ ದೇಶದಲ್ಲಿ ಅನಿಯಂತ್ರಿತವಾಗಿ ತೈಲ ಬೆಲೆ ಏರಿಕೆ ಕಂಡು ಪ್ರತಿಯೊಂದು ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ.
ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಜನರಿಗೆ ಹೊರೆಯಾಗದ ರೀತಿಯಲ್ಲಿ ಸ್ವಲ್ಪ ಏರಿಕೆ ಕಂಡರೂ ಅದನ್ನೇ ನೆಪವಾಗಿರಿಸಿಕೊಂಡು ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿತ್ತು. ಇದೀಗ ದಿನಂಪ್ರತಿ ಬೆಲೆ ಏರಿಕೆ ಕಂಡರೂ ಬಿಜೆಪಿ ಪಕ್ಷದ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರವಿಲ್ಲದಾಗ ಜನಪರ ಕಾಳಜಿ ಮಾಡುವ ನಾಟಕವಾಡುವ ಬಿಜೆಪಿ ಅಧಿಕಾರ ಪಡೆದಾಗ ಜನವಿರೋಧಿ ನಿಲುವು ತೆಗೆದುಕೊಳ್ಳುವುದು ಖಂಡನೀಯ.
ಪೆಟ್ರೋಲ್ ದರ ಏರಿಕೆಯಿಂದ ಸಾರಿಗೆ ಹಾಗೂ ಸರಕು ಸಾಗಣೆದರ ಹೆಚ್ಚಳ, ಅದರಿಂದ ಉತ್ಪಾದಕ ವಸ್ತುಗಳ ಬೆಲೆ ಏರಿಕೆ ಇದರಿಂದ ನಮ್ಮ ಅರ್ಥ ವ್ಯವಸ್ಥೆಗೆ ಹೊಡೆತ ಬೀಳಲಿದೆ. ಆದರೆ ಸರಕಾರ ಲಾಕ್ಡೌನ್ ಬಳಿಕ ಮಾರುಕಟ್ಟೆ ಚೇತರಿಸಲು ಪೂರಕ ಸನ್ನಿವೇಶ ಒದಗಿಸುವ ಬದಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕೊಡುಗೆ ನೀಡಿ ಹಣದುಬ್ಬರದಿಂದ ಜನತೆ ಇನ್ನಷ್ಟು ಸಂಕಷ್ಟ ಪಡುವಂತಾಗಿದೆ. ಬಡವರನ್ನು ಅತಿಯಾಗಿ ಬಾಧಿಸುವ ತೈಲ, ಅಡುಗೆ ಅನಿಲ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸರ್ಕಾರ ಸಂಪೂರ್ಣ ವಿಫಲವಾಗಿದೆ.
ನಾವು ಖರೀದಿಸುವ ಪ್ರತೀ ಲೀಟರ್ ಪೆಟ್ರೋಲಿಗೆ ರೂ.86ಕ್ಕೆ ಏರಿಕೆಗಿಯಾದೆ. ಇದರಲ್ಲಿ 54 ರೂಪಾಯಿಗಳಷ್ಟು ತೆರಿಗೆಯೇ ಪಾವತಿಸುತ್ತೇವೆ. ವಾಸ್ತವಾಗಿ ಪ್ರತೀ ಲೀಟರ್ ಪೆಟ್ರೋಲಿನ ಇತ್ತೀಚಿಗಿನ ಮೂಲ ದರ 31.78 ರೂಪಾಯಿ ಮಾರಾಟ ದರ 86.51 ರೂಪಾಯಿ ಹಾಗೂ ಡೀಸೆಲ್ ಮೂಲ ದರ ರೂ.32.98 ಮಾರಾಟ ದರ ರೂ. 78.31 ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮೇಲೆ ಸೇಲ್ಸ್ ಟ್ಯಾಕ್ಸ್, ವ್ಯಾಟ್, ಕೇಂದ್ರೀಯ ತೆರಿಗೆಗಳನ್ನು ವಿಧಿಸುವುದರಿಂದ ದರ ಹೆಚ್ಚಾಗುತ್ತದೆ. ಹಾಗೆಯೇ ಕೊರೋನಾ ಸೋಂಕಿನ ಭೀತಿಯಿಂದ ಆರ್ಥಿಕವಾಗಿ ಕಂಗೆಟ್ಟಿರುವ ಜನತೆ ಚೇತರಿಸಿಕೊಳ್ಳುವ ಮೊದಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಬ್ಸಿಡಿಯುಕ್ತ ಅನಿಲ (ಎಲ್.ಪಿ.ಜಿ) ಸಿಲಿಂಡರ್ ದರದಲ್ಲಿಯೂ ರೂ. 50 ಸದ್ದಿಲ್ಲದೆ ಏರಿಕೆಯಾಗಿದೆ.
ಈ ಹಿಂದೆ ಜುಲೈಯಲ್ಲಿ ದರ ಪರಿಷ್ಕರಣೆಯಾಗಿತ್ತು. ಈಗ ಪ್ರತೀ ಸಿಲಿಂಡರಿಗೆ 647 ರೂಪಾಯಿಗೆ ಏರಿಕೆಯಾಗಿದ್ದು ರೂ.50 ಹೆಚ್ಚಳವಾದಂತಾಗಿದೆ. ಇದಕ್ಕೂ ಮುನ್ನ ರೂ.597 ಆಗಿತ್ತು. ಈ ಹಿಂದೆ ಸಬ್ಸಿಡಿ ಮೊತ್ತವನ್ನು ಗ್ರಾಹಕರು ಸಿಲಿಂಡರ್ ಖರೀದಿಸಿದ ನಂತರ ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿತ್ತು. ಆದರೆ ಕಳೆದ 6 ತಿಂಗಳಿಂದ ಎಲ್ಪಿಜಿ ಸಬ್ಸಿಡಿ ಬರುತ್ತಿರಲಿಲ್ಲ. ವಿವಿಧ ತೆರಿಗೆಗಳಿಂದ ಜನರನ್ನು ಲೂಟಿ ಮಾಡಿ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳುವುದೇ ಸರಕಾರದ ಉದ್ದೇಶವಾದರೆ ಜನರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಸರಕಾರವನ್ನು ಪ್ರಶ್ನಿಸಿದ್ದಾರೆ.