ಹೊಸ ಸಂಸತ್‌ ಭವನ: ಮಧ್ಯಾಹ್ನ ಪ್ರಧಾನಿ ಮೋದಿ ಅವರಿಂದ ಅಡಿಗಲ್ಲು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್‌ ಭವನದ ಕಟ್ಟಡಕ್ಕೆ ಇಂದು ( ಗುರುವಾರ, ಡಿ. 10) ಅಡಿಗಲ್ಲು ಹಾಕಲಿದ್ದಾರೆ. ಸಂಸತ್‌ ಭವನದ ಆವರಣದಲ್ಲಿರುವ ನಿಯೋಜಿತ ಸ್ಥಳದಲ್ಲಿ ಮಧ್ಯಾಹ್ನ 12,50ಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಅಡಿಗಲ್ಲು ಹಾಕಲಿದ್ದು, ಸಮಯ 2.15ಕ್ಕೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

64,500 ಚದರ ಮೀಟರ್‌ ವಿಸ್ತೀರ್ಣದ ಈ ಕಟ್ಟ‌ಡ ನಿರ್ಮಾಣಕ್ಕೆ ಸುಮಾರು ₹971 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ಭೂಕಂಪನ ನಿರೋಧಕ ವ್ಯವಸ್ಥೆಯಡಿ ಇದನ್ನು ನಿರ್ಮಿಸಲಾಗುತ್ತಿದೆ. 2000 ಮಂದಿ ನೇರವಾಗಿ ಹಾಗೂ 9,000 ಮಂದಿ ಪರೋಕ್ಷವಾಗಿ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ನೂರು ವರ್ಷದ ಹಳೆಯ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆಯೂ ನೋಡಿಕೊಳ್ಳಲಾಗುತ್ತದೆ’ ಎಂದು ತಿಳಿಸಲಾಗಿದೆ.

ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಲುವಾಗಿ ನೂತನ ಕಟ್ಟಡದಲ್ಲಿ ಭವ್ಯವಾದ ಸಂವಿಧಾನ ಸಭಾಂಗಣ ನಿರ್ಮಿಸಲಾಗುತ್ತದೆ. ಲೋಕಸಭಾ ಹಾಗೂ ರಾಜ್ಯಸಭಾ ಸದನಗಳಲ್ಲಿ ಕ್ರಮವಾಗಿ 888 ಮತ್ತು 384 ಆಸನ ಸಾಮರ್ಥ್ಯ ಹೊಂದಿರಲಿವೆ. ಮುಂದಿನ ದಿನಗಳಲ್ಲಿ ಉಭಯ ಸದನಗಳ ಸದಸ್ಯರ ಸಂಖ್ಯೆಯಲ್ಲಿ ಏರಿಕೆಯಾಗಬಹುದೆಂಬುದನ್ನು ಗಮನದಲ್ಲಿಟ್ಟುಕೊಂಡು ಆಸನ ಸಾಮರ್ಥ್ಯ ಹೆಚ್ಚಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!