ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯ ಸ್ಥಾನಗಳಿಗೆ ಹರಾಜು ಕೂಗಿದರೆ ಎಫ್‌ಐಆರ್: ಆಯೋಗ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿರುವ ಬೆನ್ನಲ್ಲೆ, ಕೆಲವು ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯ ಸ್ಥಾನಗಳಿಗೆ ಹರಾಜು ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವುದನ್ನು ಗಂಭೀರವಾಗಿ ‍ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗ, ಅಂಥ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

‘ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳನ್ನು ಹರಾಜು ಮಾಡಲಾಗಿದೆ ಎಂಬ ಆರೋಪಗಳಲ್ಲಿ ಸತ್ಯಾಂಶವಿದ್ದರೆ ಇದೊಂದು ಗಂಭೀರ ದುರ್ನಡತೆ ಮತ್ತು ಅವ್ಯವಹಾರವಾಗುತ್ತದೆ’ ಎಂದು ಆಯೋಗದ ಕಾರ್ಯದರ್ಶಿ ಹೊನ್ನಾಂಬ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ಪತ್ರ ಬರೆದಿದ್ದಾರೆ.

ಅದರ ಬೆನ್ನಲ್ಲೆ, ಜಿಲ್ಲಾಧಿಕಾರಿಗಳ ಜೊತೆ ಬುಧವಾರ ವಿಡಿಯೊ ಸಂವಾದ ನಡೆಸಿದ ರಾಜ್ಯ ಚುನಾವಣಾ ಆಯುಕ್ತ ಬಿ. ಬಸವರಾಜು, ‘ಇಂಥ ಪ್ರಕರಣಗಳು ಕಂಡುಬಂದರೆ ಜನಪ್ರತಿನಿಧಿಗಳ ಕಾಯ್ದೆ ಮತ್ತು ಗ್ರಾಮ ಸ್ವರಾಜ್‌ ಪಂಚಾಯತ್‌ ರಾಜ್‌ ಕಾಯ್ದೆ –1993 ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆಯೋಗದಿಂದ ಜಿಲ್ಲಾಧಿಕಾರಿಗಳಿಗೆ ಪತ್ರ

ರಾಜ್ಯ ಸರ್ಕಾರ ಪತ್ರ ಬರೆದ ತಕ್ಷಣವೇ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗ, ಈ ಬಗ್ಗೆ ದಾವಣಗೆರೆ, ತುಮಕೂರು, ಹಾಸನ, ಮಂಡ್ಯ, ವಿಜಯಪುರ, ಹಾವೇರಿ, ಕಲಬುರ್ಗಿ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

ಗ್ರಾಮ ಪಂಚಾಯಿತಿ ಸದಸ್ಯರ ಆಯ್ಕೆ ಸಂಬಂಧ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಕೆಲವು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಹರಾಜಿನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿಗಳು ಬಂದಿವೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲ, ತಮ್ಮ ಸ್ಪಷ್ಟ ಅಭಿಪ್ರಾಯದೊಂದಿಗೆ ಸಮಗ್ರ ವರದಿಯನ್ನು ಆಯೋಗಕ್ಕೆ ಜರೂರಾಗಿ ಸಲ್ಲಿಸಬೇಕು ಎಂದೂ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ಆಯೋಗ ನಿರ್ದೇಶನ ನೀಡಿದೆ. 

ಸ್ಥಳೀಯರಿಂದ ಬಂದ ದೂರು ಮತ್ತು ಮಾಧ್ಯಮಗಳ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಕೂಲಂಕಷವಾಗಿ ಪರಿಶೀಲಿಸುವಂತೆ ಮತ್ತು ಪ್ರಕರಣಗಳು ದೃಢಪಟ್ಟರೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉಪ
ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳಿಂದ ವರದಿ ತರಿಸಿಕೊಂಡು ಜಿಲ್ಲಾಧಿಕಾರಿಗಳು ಪರಿಶೀಲಿಸಲಿದ್ದಾರೆ. ಕೆಲ ಪ್ರಕರಣಗಳಲ್ಲಿ ಕೇವಲ ಸುದ್ದಿಯಾಗಿದೆಯಷ್ಟೆ. ಹರಾಜುನಡೆದಿಲ್ಲವೆಂದು ಮಾಹಿತಿ ಬಂದಿದೆ.

ಆಯೋಗಕ್ಕೆ ಬರೆದ ಪತ್ರದಲ್ಲಿ, ‘ಬಳ್ಳಾರಿ,ಮಂಡ್ಯ, ತುಮಕೂರು, ಕಲಬುರ್ಗಿ ಜಿಲ್ಲೆಗಳ ಕೆಲವು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಮಾಡಿರುವ ಆರೋಪ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದ್ದಾರೆ.

ಹರಾಜು ಪ್ರಕರಣಗಳಲ್ಲಿ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದು ಅಷ್ಟು ಸುಲಭವಲ್ಲ. ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು. ಕೇಸು ದಾಖಲಾದರೆ, ಅಭ್ಯರ್ಥಿ ಮೊಕದ್ದಮೆ ಎದುರಿಸಬೇಕಾಗುತ್ತದೆ ರಾಜ್ಯ ಚುನಾವಣಾ ಆಯೋಗ ಆಯುಕ್ತ ಬಿ. ಬಸವರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!