15 ದಿನದಲ್ಲಿ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಿ: ಸುಪ್ರೀಂ ಗಡುವು

ನವದೆಹಲಿ: ಕೊರೋನಾ ವೈರಸ್ ಲಾಕ್‌ಡೌನ್ ನಿಂದಾಗಿ ದೇಶದ ವಿವಿಧ ನಗರಗಳಲ್ಲಿ ಸಿಲುಕಿರುವ ಎಲ್ಲಾ ವಲಸೆ ಕಾರ್ಮಿಕರನ್ನು 15 ದಿನದೊಳಗೆ ಅವರ ತವರು ರಾಜ್ಯಗಳಿಗೆ ಕಳುಹಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. 

ಇಂದು ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್ ಕೆ ಕೌಲ್ ಮತ್ತು ಎಂಆರ್ ಶಾ ಒಳಗೊಂಡ ಸುಪ್ರೀಂ ಪೀಠ, ಎಲ್ಲಾ ವಲಸೆ ಕಾರ್ಮಿಕರನ್ನು ಸ್ಥಳಾಂತರಿಸಲು 15 ದಿನ ಸಾಕು ಎಂದು ಹೇಳಿದೆ.

ಇದೇ ವೇಳೆ ವಲಸೆ ಕಾರ್ಮಿಕರ ನೋಂದಣಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುರಿತು ಜೂನ್ 9ರಂದು ಆದೇಶ ಹೊರಡಿಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಅಲ್ಲದೆ ಎಲ್ಲ ರಾಜ್ಯಗಳು ಕಾರ್ಮಿಕರಿಗೆ ಉದ್ಯೋಗ ಮತ್ತು ಇತರೆ ಪರಿಹಾರವನ್ನು ನೀಡಿದ ಬಗ್ಗೆ ದಾಖಲೆ ಪ್ರಸ್ತುತ ಪಡಿಸಬೇಕು ಎಂದು ಹೇಳಿದೆ.

ಇದುವರೆಗೆ 1 ಕೋಟಿ ವಲಸೆ ಕಾರ್ಮಿಕರನ್ನು ಶ್ರಮಿಕ್ ರೈಲುಗಳ ಮೂಲಕ ಅವರ ರಾಜ್ಯಗಳಿಗೆ ತಲುಪಿಸಲಾಗಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೋರ್ಟ್ ಗೆ ಮಾಹಿತಿ ನೀಡಿದರು.

ರೈಲ್ವೆ ಇಲಾಖೆಯ 4,228 ವಿಶೇಷ ಶ್ರಮಿಕ್‌ ರೈಲುಗಳ ಮೂಲಕ ಜೂನ್‌ 3ರವರೆಗೆ 57 ಲಕ್ಷ ವಲಸೆ ಕಾರ್ಮಿಕರು ಮನೆ ತಲುಪಿದ್ದಾರೆ. ಇನ್ನು, ರಸ್ತೆ ಮೂಲಕ 41 ಲಕ್ಷ ಜನರನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!